ADVERTISEMENT

IND vs ENG Test: ರಾಹುಲ್–ಜಡೇಜ ಮಿಂಚು; ಭಾರತಕ್ಕೆ ಮುನ್ನಡೆ

ಕ್ರಿಕೆಟ್: ಒಲಿ ರಾಬಿನ್ಸನ್‌ಗೆ ಐದು ವಿಕೆಟ್, ಆ್ಯಂಡರ್ಸನ್‌ ಬಿರುಗಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2021, 16:36 IST
Last Updated 6 ಆಗಸ್ಟ್ 2021, 16:36 IST
ಅರ್ಧಶತಕ ಗಳಿಸಿದ ಸಂಭ್ರಮದಲ್ಲಿ ಕೆ.ಎಲ್.ರಾಹುಲ್. ಇನ್ನೊಂದು ತುದಿಯಲ್ಲಿ ಅಜಿಂಕ್ಯ ರಹಾನೆ ಇದ್ದಾರೆ.
ಅರ್ಧಶತಕ ಗಳಿಸಿದ ಸಂಭ್ರಮದಲ್ಲಿ ಕೆ.ಎಲ್.ರಾಹುಲ್. ಇನ್ನೊಂದು ತುದಿಯಲ್ಲಿ ಅಜಿಂಕ್ಯ ರಹಾನೆ ಇದ್ದಾರೆ.   

ನಾಟಿಂಗ್‌ಹ್ಯಾಮ್: ಎರಡು ವರ್ಷಗಳ ನಂತರ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಇವರಿಬ್ಬರ ಅಮೋಘ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶುಕ್ರವಾರ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 95 ರನ್‌ಗಳ ಮುನ್ನಡೆ ಸಾಧಿಸಿತು.

ಮೂರನೇ ದಿನದಾಟದಲ್ಲಿ ರಾಹುಲ್ (84; 214 ಎಸೆತ) ತಾಳ್ಮೆಯ ಆಟ ಮತ್ತು ಜಡೇಜ (56; 86ಎಸೆತ) ಅವರ ಮಿಂಚಿನ ಬ್ಯಾಟಿಂಗ್‌ನಿಂದಾಗಿ ಭಾರತ ತಂಡವು 84.5 ಓವರ್‌ಗಳಲ್ಲಿ 278 ರನ್ ಗಳಿಸಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 11 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 25 ರನ್ ಗಳಿಸಿದೆ.

ADVERTISEMENT

ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ತಂಡವು 183 ರನ್‌ ಗಳಿಸಿತ್ತು. ಎರಡನೇ ದಿನವಾದ ಗುರುವಾರ ಜೇಮ್ಸ್‌ ಆ್ಯಂಡರ್ಸನ್ ಬೌಲಿಂಗ್‌ಗೆ ತತ್ತರಿಸುವ ಹಾದಿಯಲ್ಲಿದ್ದ ವಿರಾಟ್ ಕೊಹ್ಲಿ ಬಳಗವನ್ನು ಮಳೆರಾಯ ಪಾರುಮಾಡಿದ್ದ.

ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದ ರಾಹುಲ್ ಮತ್ತು ಪಂತ್ ಶುಕ್ರವಾರ ತಾಳ್ಮೆಯಿಂದ ಇನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಆದರೆ ಪಂತ್ ವಿಕೆಟ್ ಕಬಳಿಸಿದ ಒಲಿ ರಾಬಿನ್ಸನ್ ಜೊತೆಯಾಟ ಮುರಿದರು.

ಈ ಹಂತದಲ್ಲಿ ಕ್ರೀಸ್‌ಗೆ ಬಂದ ಜಡೇಜ ಅವರು ರಾಹುಲ್ ಜೊತೆಗೆ ಆರನೇ ವಿಕೆಟ್ ಜೊತೆಯಾಟದಲ್ಲಿ 60 ರನ್‌ಗಳನ್ನು ಸೇರಿಸಿದರು. ಆ್ಯಂಡರ್ಸನ್, ರಾಬಿನ್ಸನ್, ಸ್ಟುವರ್ಟ್ ಬ್ರಾಡ್ ಮತ್ತು ಸ್ಯಾಮ್ ಕರನ್ ಅವರ ದಾಳಿಯನ್ನು ದಿಟ್ಟತನದಿಂದ ಎದುರಿಸಿದರು.

ಶತಕ ಗಳಿಸುವ ನಿರೀಕ್ಷೆ ಮೂಡಿಸಿದ್ದ ರಾಹುಲ್ 69ನೇ ಓವರ್‌ನಲ್ಲಿ ಎಡವಿದರು. ಆ್ಯಂಡರ್ಸನ್ ಎಸೆತವನ್ನು ಆಡುವ ಭರದಲ್ಲಿ ಜೋಸ್ ಬಟ್ಲರ್‌ಗೆ ಕ್ಯಾಚಿತ್ತರು. ಜೊತೆಯಾಟ ಮುರಿದುಬಿತ್ತು. ನಂತರದ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಕೂಡ ಔಟಾದರು. ಜಡೇಜ ಸ್ವಲ್ಪ ಹೊತ್ತು ಹೋರಾಟ ಮಾಡಿದರು. ಅರ್ಧಶತಕ ಗಳಿಸಿದ್ದ ಅವರು ರಾಬಿನ್ಸನ್ ಎಸೆತದಲ್ಲಿ ಔಟಾದರು.

ಆದರೆ ಕೊನೆಯ ಹಂತದಲ್ಲಿ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಮಿಂಚಿದರು. ಮೊದಲ ದಿನ ಬೌಲಿಂಗ್‌ನಲ್ಲಿ ಮಿಂಚಿದ್ದ ಇವರಿಬ್ಬರೂ ಬ್ಯಾಟಿಂಗ್‌ನಲ್ಲಿಯೂ ತಮ್ಮ ಸಾಮರ್ಥ್ಯ ತೋರಿದರು.

ಶಮಿ 13 ಮತ್ತು ಬೂಮ್ರಾ 28 ರನ್‌ ಗಳಿಸಿ, ತಂಡದ ಮುನ್ನಡೆಯ ಅಂತರ ಹೆಚ್ಚುವಂತೆ ಮಾಡಿದರು.

ಇಂಗ್ಲೆಂಡ್‌ನ ರಾಬಿನ್ಸನ್ ಐದು ವಿಕೆಟ್ ಗೊಂಚಲು ಗಳಿಸಿದರು. ಆ್ಯಂಡರ್ಸನ್ ನಾಲ್ಕು ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.