ಟಿಮ್ ಸೌಥಿ
ರಾಯಿಟರ್ಸ್ ಚಿತ್ರ
ಲಂಡನ್: ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಗೆ ಇಂಗ್ಲೆಂಡ್ ತಂಡದ ವಿಶೇಷ ಕೌಶಲ ಸಲಹಾಗಾರರನ್ನಾಗಿ ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್ ಟಿಮ್ ಸೌಥಿ ಅವರನ್ನು 'ಇಂಗ್ಲೆಂಡ್ & ವೇಲ್ಸ್ ಕ್ರಿಕೆಟ್ ಮಂಡಳಿ' (ಇಸಿಬಿ) ಗುರುವಾರ ನೇಮಿಸಿದೆ.
ಆತಿಥೇಯ ಇಂಗ್ಲೆಂಡ್ ಹಾಗೂ ಭಾರತ ನಡುವಣ ಐದು ಟೆಸ್ಟ್ ಪಂದ್ಯಗಳ ಸರಣಿಯು ಜೂನ್ 20ರಂದು ಆರಂಭವಾಗಲಿದೆ.
ನ್ಯೂಜಿಲೆಂಡ್ ಪರ ಮೂರೂ (ಟಿ20, ಏಕದಿನ ಹಾಗೂ ಟೆಸ್ಟ್) ಮಾದರಿಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿ ಹೊಂದಿರುವ ಸೌಥಿ, 2024ರ ಡಿಸೆಂಬರ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅವರು ಮೂರೂ ಮಾದರಿಗಳಿಂದ ಒಟ್ಟು 776 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇಂಗ್ಲೆಂಡ್ ತಂಡವು ಭಾರತ ವಿರುದ್ಧದ ಸರಣಿಗೂ ಮುನ್ನ ಜಿಂಬಾಬ್ವೆ ವಿರುದ್ಧ ಒಂದು ಪಂದ್ಯದಲ್ಲಿ ಆಡಲಿದೆ. ಆ ಪಂದ್ಯ ಮೇ 22ರಂದು ಆರಂಭವಾಗಲಿದ್ದು, ಆ ವೇಳೆಗೆ ಸೌಥಿ ಇಂಗ್ಲೆಂಡ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ವಿಶ್ವದೆಲ್ಲಡೆ, ಎಲ್ಲ ರೀತಿಯ ಪರಿಸ್ಥಿತಿಯಲ್ಲೂ ಆಡಿದ ಅನಭವ ಹೊಂದಿರುವ ಸೌಥಿ, ನಮ್ಮ ಆಟಗಾರರಿಗೆ ಮೌಲ್ಯಯುತ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಇಸಿಬಿ ಹೇಳಿದೆ.
ಸೌಥಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ 107 ಟೆಸ್ಟ್, 161 ಏಕದಿನ ಹಾಗೂ 126 ಟಿ20 ಪಂದ್ಯಗಳನ್ನಾಡಿದ್ದಾರೆ.
ENG vs IND ಟೆಸ್ಟ್ ಸರಣಿ
1ನೇ ಪಂದ್ಯ: ಜೂನ್ 20–24 – ಹೆಡಿಂಗ್ಲೇ, ಲೀಡ್ಸ್
2ನೇ ಪಂದ್ಯ: ಜುಲೈ 02–06 – ಎಜ್‌ಬಾಸ್ಟನ್, ಬರ್ಮಿಂಗ್‌ಹ್ಯಾಮ್
3ನೇ ಪಂದ್ಯ: ಜುಲೈ 10–14 – ಲಾರ್ಡ್ಸ್, ಲಂಡನ್
4ನೇ ಪಂದ್ಯ: ಜುಲೈ 23–27 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
5ನೇ ಪಂದ್ಯ: ಜುಲೈ 31–ಆಗಸ್ಟ್ 4 – ಓವಲ್, ಲಂಡನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.