ಲಂಡನ್: ಸೋಫಿಯಾ ಡಂಕ್ಲಿ ಮತ್ತು ವೈಟ್ ಹಾಜ್ ಅವರ ಅಮೋಘ ಜೊತೆಯಾಟದ ಬಲದಿಂದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಭಾರತ ತಂಡದ ಎದುರಿನ ಟಿ20 ಪಂದ್ಯದಲ್ಲಿ ಜಯಭೇರಿ ಬಾರಿಸಿತು.
ಶುಕ್ರವಾರ ತಡರಾತ್ರಿ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯ ತಂಡವು 5 ರನ್‌ಗಳಿಂದ ಜಯಿಸಿತು. ಐದು ಪಂದ್ಯಗಳ ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಜಯಿಸಿದ್ದ ಭಾರತದ ಓಟಕ್ಕೆ ಅಡ್ಡಗಾಲು ಹಾಕಿತು. ಭಾರತ ವನಿತೆಯರ ತಂಡವು 2–1ರ ಮುನ್ನಡೆ ಕಾಯ್ದುಕೊಂಡಿದೆ.
ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು ಆರಂಭಿಕ ಬ್ಯಾಟರ್ ಸೋಫಿ ಡಂಕ್ಲಿ (75; 53ಎಸೆತ, 4X7, 6X1) ಮತ್ತು ವೈಡ್ ಹಾಜ್ (66; 42ಎ, 4X7, 6X3) ಮೊದಲ ವಿಕೆಟ್ ಜೊತೆಯಾಟದಲ್ಲಿ 131 ರನ್ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 171 ರನ್‌ಗಳ ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು. 16ನೇ ಓವರ್‌ನಲ್ಲಿ ಸೋಫಿಯಾ ವಿಕೆಟ್ ಗಳಿಸಿದ ದೀಪ್ತಿ ಶರ್ಮಾ ಜೊತೆಯಾಟವನ್ನು ಮುರಿದರು. ನಂತರ ಬಂದ ಬ್ಯಾಟರ್‌ಗಳು ಹೆಚ್ಚು ರನ್ ಹೊಡೆಯಲಿಲ್ಲ. ಅರುಂಧತಿ ರೆಡ್ಡಿ (32ಕ್ಕೆ3), ದೀಪ್ತಿ (27ಕ್ಕೆ3) ಮತ್ತು ಶ್ರೀಚರಣಿ (43ಕ್ಕೆ2) ಅವರು ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು.
ಗುರಿ ಬೆನ್ನಟ್ಟಿದ ಭಾರತ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 166 ರನ್ ಗಳಿಸಿತು. ಸರಣಿಯ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದ ಸ್ಮೃತಿ ಮಂದಾನ (56; 49ಎ, 4X10)ಇಲ್ಲಿಯೂ ಅರ್ಧಶತಕ ಗಳಿಸಿದರು. ಅವರು ಮತ್ತು ಶಫಾಲಿ ವರ್ಮಾ (47; 25ಎ, 4X7, 6X2) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ ಒಂಬತ್ತು ಓವರ್‌ಗಳಲ್ಲಿ 85 ರನ್ ಸೇರಿಸಿದರು. ಆದರೆ ನಂತರ ಬಂದ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸದಂತೆ ಇಂಗ್ಲೆಂಡ್ ಬೌಲರ್‌ಗಳು ಬಿಗಿ ದಾಳಿ ನಡೆಸಿದರು.
ಸಂಕ್ಷಿಪ್ತ ಸ್ಕೋರು:
ಇಂಗ್ಲೆಂಡ್: 20 ಓವರ್‌ಗಳಲ್ಲಿ 9ಕ್ಕೆ171 (ಸೋಫಿಯಾ ಡಂಕ್ಲಿ 75, ವೈಟ್ ಹಾಜ್ 66, ಅರುಂಧತಿ ರೆಡ್ಡಿ 32ಕ್ಕೆ3, ದೀಪ್ತಿ ಶರ್ಮಾ 27ಕ್ಕೆ3, ಶ್ರೀ ಚರಣಿ 43ಕ್ಕೆ2) ಭಾರತ: 20 ಓವರ್‌ಗಳಲ್ಲಿ 5ಕ್ಕೆ166 (ಸ್ಮೃತಿ ಮಂದಾನ 56, ಶಫಾಲಿ ವರ್ಮಾ 47, ಜೆಮಿಮಾ ರಾಡ್ರಿಗಸ್ 20, ಹರ್ಮನ್‌ಪ್ರೀತ್ ಕೌರ್ 23, ಲಾರೆನ್ ಫೈಲರ್ 30ಕ್ಕೆ2) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 5 ರನ್‌ಗಳ ಜಯ. ಪಂದ್ಯದ ಆಟಗಾರ್ತಿ: ಸೋಫಿಯಾ ಡಂಕ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.