ADVERTISEMENT

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ತರಬೇತಿ ಜೂನ್ 22ರಂದು ಆರಂಭ

ಏಜೆನ್ಸೀಸ್
Published 18 ಜೂನ್ 2020, 15:16 IST
Last Updated 18 ಜೂನ್ 2020, 15:16 IST
ಇಂಗ್ಲೆಂಡ್ ಮಹಿಳಾ ತಂಡ –ರಾಯಿಟರ್ಸ್ ಚಿತ್ರ
ಇಂಗ್ಲೆಂಡ್ ಮಹಿಳಾ ತಂಡ –ರಾಯಿಟರ್ಸ್ ಚಿತ್ರ   

ಲಂಡನ್: ಸೆಪ್ಟೆಂಬರ್‌ನಲ್ಲಿ ನಡೆಸಲು ಉದ್ದೇಶಿಸಿರುವ ತ್ರಿಕೋನ ಏಕದಿನ ಸರಣಿಗೆ ಸಜ್ಜಾಗುವುದಕ್ಕಾಗಿ ಈ ತಿಂಗಳ 22ರಂದು ಇಂಗ್ಲೆಂಡ್ ಮಹಿಳೆಯರ ಕ್ರಿಕೆಟ್ ತಂಡ ಅಭ್ಯಾಸ ಆರಂಭಿಸಲಿದೆ. ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ಮುಖ್ಯಸ್ಥ ಗುರುವಾರ ಈ ವಿಷಯ ಪ್ರಕಟಿಸಿದ್ದಾರೆ.

ಈ ತಿಂಗಳ ಕೊನೆಯಲ್ಲಿ ನಡೆಸಲು ಉದ್ದೇಶಿಸಿದ್ದ ಭಾರತ ಮಹಿಳಾ ತಂಡದ ಎದುರಿನ ಸರಣಿಯನ್ನು ಕೊರೊನಾ ಹಾವಳಿಯಿಂದಾಗಿ ಇಸಿಬಿ ಮುಂದೂಡಿತ್ತು. ಪುರುಷರ ಕ್ರಿಕೆಟ್‌ ಪುನರಾರಂಭಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ ಮಹಿಳಾ ತಂಡದ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಮಹಿಳಾ ತಂಡಕ್ಕೆ ಈ ವರ್ಷ ಒಂದು ಸರಣಿ ಕೂಡ ಸಿಗದೇ ಹೋಗಬಹುದು ಎಂಬ ಭೀತಿ ಎದುರಾಗಿದೆ.

ಈ ನಡುವೆ ಇಸಿಬಿಯು ತ್ರಿಕೋನ ಸರಣಿ ನಡೆಸುವ ಕುರಿತು ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಜೊತೆ ಚರ್ಚೆ ನಡೆಸಿದೆ.

ADVERTISEMENT

2017ರ ಮಹಿಳೆಯರ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಗೆದ್ದ ತಂಡದಲ್ಲಿದ್ದ ನಾಯಕಿ ಹೀದರ್ ನೈಟ್‌ ಸೇರಿದಂತೆ 24 ಆಟಗಾರ್ತಿಯರು 22ರಂದು ನೆಟ್ಸ್‌ಗೆ ಇಳಿಯಲಿದ್ದಾರೆ. ತರಬೇತಿಗಳು ವಿವಿಧ ಹಂತಗಳಲ್ಲಿ ನಡೆಯಲಿದ್ದು ಇದಕ್ಕಾಗಿ ಬಯೋ ಸೆಕ್ಯೂರ್ ಸೌಲಭ್ಯವನ್ನು ಒದಗಿಸಲಾಗುವುದು. ಎಲ್ಲ ಬಗೆಯ ವೈದ್ಯಕೀಯ ಮಾರ್ಗಸೂಚಿಗಳನ್ನು ಈ ಸಂದರ್ಭದಲ್ಲಿ ಅನುಸರಿಸಲಾಗುವುದು. ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಪುರುಷರ ತಂಡಕ್ಕೂ ಇದು ಅನ್ವಯವಾಗುತ್ತದೆ ಎಂದು ಇಸಿಬಿ ತಿಳಿಸಿದೆ.

‘ಈ ವರ್ಷದ ಬೇಸಿಗೆಯಲ್ಲಿ ಮಹಿಳಾ ಕ್ರಿಕೆಟಿಗರು ಪೂರ್ಣಪ್ರಮಾಣದಲ್ಲಿ ಅಂಗಣಕ್ಕೆ ಇಳಿಯಲು ಸಾಧ್ಯವಾಗುವ ಭರವಸೆ ಇದೆ. ಆಟಗಾರ್ತಿಯರು ತರಬೇತಿಗೆ ಸಜ್ಜಾಗಿದ್ದಾರೆ ಎಂಬುದು ಸದ್ಯ ಸಂತೋಷದ ವಿಷಯ. ತಂಡವು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ತಯಾರಾಗಿದೆ ಎಂಬುದರ ಲಕ್ಷಣ ಇದು’ ಎಂದು ಇಸಿಬಿ ಮಹಿಳಾ ಕ್ರಿಕೆಟ್ ನಿರ್ದೇಶಕ ಜೊನಾಥನ್ ಫಿಂಚ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.