ನವದೆಹಲಿ: ಪುರುಷ ಕ್ರಿಕೆಟಗರಿಗೆ ನೀಡುವಷ್ಟೇ ಸಂಭಾವನೆ ಯನ್ನು ಮಹಿಳಾ ಕ್ರಿಕೆಟಿಗರಿಗೂ ನೀಡುವ ಐತಿಹಾಸಿಕ ತೀರ್ಮಾನವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರ ತೆಗೆದುಕೊಂಡಿದೆ.
ಬಿಸಿಸಿಐ ಅಪೆಕ್ಸ್ ಸಮಿತಿ ತುರ್ತುಸಭೆಯಲ್ಲಿ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಮಂಡಳಿಯ ಕೇಂದ್ರ ಗುತ್ತಿಗೆಯಲ್ಲಿರುವ ಆಟಗಾರ್ತಿಯರಿಗೆ ಹೊಸ ಸಂಭಾವನೆ ಅನ್ವಯವಾಗಲಿದೆ.
ಮಹಿಳಾ ಕ್ರಿಕೆಟಿಗರು ಇನ್ನು ಮುಂದೆ ಏಕದಿನ ಪಂದ್ಯಗಳಿಗೆ ಈಗ ಪಡೆಯುವ ಸಂಭಾವನೆಗಿಂತ ಆರು ಪಟ್ಟು ಅಧಿಕ ವೇತನ ಗಳಿಸಲಿದ್ದಾರೆ. ಈಗ ₹ 1 ಲಕ್ಷ ಸಂಭಾವನೆ ಪಡೆಯುತ್ತಿದ್ದು, ಹೊಸ ವ್ಯವಸ್ಥೆಯಲ್ಲಿ ₹ 6 ಲಕ್ಷ ಗಳಿಸಲಿದ್ದಾರೆ.
ಟಿ20 ಪಂದ್ಯದ ವೇತನ ಈಗಿನ ₹ 1 ಲಕ್ಷದಿಂದ ₹ 3 ಲಕ್ಷಕ್ಕೆ ಏರಿಕೆಯಾಗಲಿದೆ. ಪ್ರತಿ ಟೆಸ್ಟ್ ಪಂದ್ಯಕ್ಕೆ ಈಗ ₹ 4 ಲಕ್ಷ ಸಂಭಾವನೆ ಪಡೆಯುತ್ತಿದ್ದು, ಇನ್ನು ಮುಂದೆ ₹ 15 ಲಕ್ಷ ಪಡೆಯಲಿದ್ದಾರೆ.
‘ಲಿಂಗ ಅಸಮಾನತೆಯನ್ನು ತೊಲಗಿಸುವ ನಿಟ್ಟಿನಲ್ಲಿ ಬಿಸಿಸಿಐ ಇಟ್ಟ ಮೊದಲ ಹೆಜ್ಜೆಯಿದು. ಇನ್ನು ಮುಂದೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರು ಸಮಾನ ಪಂದ್ಯ ಶುಲ್ಕ ಪಡೆಯಲಿದ್ದು, ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯ ಹೊಸ ಯುಗಕ್ಕೆ ಕಾಲಿಡುತ್ತಿದ್ದೇವೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ‘ಟ್ವೀಟ್’ ಮಾಡಿದ್ದಾರೆ.
ಭಾರತವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ಸಂಭಾವನೆ ನೀಡುವ ಎರಡನೇ ದೇಶ ಎನಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಇಂತಹದೇ ನಿರ್ಧಾರ ತೆಗೆದುಕೊಂಡಿತ್ತು.
ಭಾರತ ಮಹಿಳಾ ತಂಡ ಈಚೆಗೆ ಬಾಂಗ್ಲಾದೇಶದಲ್ಲಿ ನಡೆದಿದ್ದ ಏಷ್ಯಾ ಕಪ್ ಟೂರ್ನಿಯನ್ನು ಗೆದ್ದುಕೊಂಡಿತ್ತು. ಅದಕ್ಕೂ ಮುನ್ನ ಬರ್ಮಿಂಗ್‌ಹ್ಯಾಂನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿತ್ತು.
ಸ್ವಾಗತ: ಬಿಸಿಸಿಐ ನಿರ್ಧಾರಕ್ಕೆ ಕ್ರಿಕೆಟ್ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ‘ಇದು ಐತಿಹಾಸಿಕ ತೀರ್ಮಾನ. ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ ಆರಂಭವಾಗಿದೆ’ ಎಂದು ಭಾರತದ ಮಹಿಳಾ ಕ್ರಿಕೆಟ್‌ನ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಗುತ್ತಿಗೆ: ಭಾರಿ ವ್ಯತ್ಯಾಸ
ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಇನ್ನು ಮುಂದೆ ಸಮಾನ ಪಂದ್ಯ ಶುಲ್ಕ ಸಿಗುವುದಾದರೂ, ಕೇಂದ್ರ ಗುತ್ತಿಗೆಯಲ್ಲಿ ನೀಡುವ ಸಂಭಾವನೆಯ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವಿದೆ.
ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಪುರುಷರ ವಿಭಾಗದಲ್ಲಿ ನಾಲ್ಕು ಗುಂಪುಗಳಿಗೆ ಕ್ರಮವಾಗಿ ₹ 7 ಕೋಟಿ (ಎ +), ₹ 5 ಕೋಟಿ (ಎ), ₹ 3 ಕೋಟಿ (ಬಿ) ಮತ್ತು ₹ 1 ಕೋಟಿ (ಸಿ) ನೀಡಲಾಗುತ್ತಿದೆ.
ಮಹಿಳೆಯರ ಗುತ್ತಿಗೆಯ ‘ಎ’ ಗುಂಪಿನರಿಗೆ ₹50 ಲಕ್ಷ, ಬಿ ಮತ್ತು ಸಿ ಗುಂಪಿನವರಿಗೆ ಕ್ರಮವಾಗಿ ₹ 30 ಲಕ್ಷ ಹಾಗೂ ₹ 10 ಲಕ್ಷ ಲಭಿಸುತ್ತದೆ.
ಕ್ರಾಂತಿಕಾರಿ ನಿರ್ಧಾರ: ಶಾಂತಾ
ಬೆಂಗಳೂರು: ಭಾರತದ ಕ್ರಿಕೆಟ್ ಇತಿಹಾಸದಲ್ಲಿಯೇ ಇದೊಂದು ಕ್ರಾಂತಿಕಾರಿ ನಿರ್ಧಾರವಾಗಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಮಹಿಳಾ ಕ್ರಿಕೆಟ್ ಆರಂಭವಾಗಿ ದಶಕಗಳೇ ಕಳೆದಿವೆ. ಆದರೂ ಅಲ್ಲಿ ಇಂತಹ ತೀರ್ಮಾನ ಕೈಗೊಂಡಿಲ್ಲ. ಹೋದ ವರ್ಷ ನ್ಯೂಜಿಲೆಂಡ್ ಇಂತಹ ನಿರ್ಧಾರ ತೆಗೆದುಕೊಂಡಿತ್ತು. ಇದೀಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಭಿನಂದನಾರ್ಹ ಕಾರ್ಯ ಮಾಡಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಸಂತಸ ವ್ಯಕ್ತಪಡಿಸಿದರು.
‘ಅಪೆಕ್ಸ್ ಸಮಿತಿಯ ಸದಸ್ಯೆಯಾಗಿರುವ ನಾನೂ ಇಂದಿನ (ಗುರುವಾರ) ಸಭೆಯಲ್ಲಿದ್ದೆ. ಈ ತೀರ್ಮಾನದಿಂದ ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ದೊಡ್ಡ ಪ್ರೋತ್ಸಾಹ ಸಿಗುತ್ತದೆ. ಪುರುಷ ಹಾಗೂ ಮಹಿಳಾ ಕ್ರಿಕೆಟ್ ನಡುವಿನ ಅಂತರವನ್ನು ತೊಲಗಿಸಲು ಇದು ದಿಟ್ಟ ಹೆಜ್ಜೆಯಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಿಸಿಸಿಐ ನಿರ್ಧಾರದಿಂದ ಕೇಂದ್ರಿಯ ಗುತ್ತಿಗೆಯಲ್ಲಿರುವ 20–22 ಆಟಗಾರ್ತಿಯರಿಗೆ ಅನುಕೂಲವಾಗಲಿದೆ. ಇದೇ ರೀತಿಯ ನಿರ್ಣಯವನ್ನು ದೇಶಿ ಕ್ರಿಕೆಟ್‌ನಲ್ಲಿಯೂ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಈ ಕುರಿತು ಪರಿಶೀಲಿಸುವ ಭರವಸೆ ನೀಡಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಮಹಿಳೆಯರಿಗೆ ₹ 20 ಸಾವಿರ ಹಾಗೂ ಪುರುಷರಿಗೆ ₹ 60 ಸಾವಿರ ಪಂದ್ಯ ಶುಲ್ಕ ನೀಡಲಾಗುತ್ತಿದೆ. ಈ ಹಂತದಲ್ಲಿ ಏಕರೂಪ ನಿಯಮ ಬಂದರೆ 200ಕ್ಕೂ ಹೆಚ್ಚು ಆಟಗಾರ್ತಿಯರಿಗೆ ನೆರವಾಗುವುದು. ಅಲ್ಲದೇ ಹೆಚ್ಚು ಹುಡುಗಿಯರು ಕ್ರಿಕೆಟ್‌ನತ್ತ ಒಲವು ತೋರುವರು’ ಎಂದು ಶಾಂತಾ ಹೇಳಿದರು.
ಅಪೆಕ್ಸ್ ಸಮಿತಿಯ ಸದಸ್ಯೆಯಾಗಿ ಶಾಂತಾ ಅವರಿಗೆ ಇದು ಕೊನೆಯ ಸಭೆಯಾಗಿತ್ತು. ಅವರ ಕಾರ್ಯಾವಧಿಯು ಮುಗಿಯಲಿದೆ. ಶಾಂತಾ ಅವರ ಸ್ಥಾನಕ್ಕೆ ಶುಭಾಂಗಿ ಕುಲಕರ್ಣಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಹರ್ಮನ್‌ಪ್ರೀತ್ ಕೌರ್ ಸಂತಸ
‘ಪುರುಷ ಹಾಗೂ ಮಹಿಳೆಯರಲ್ಲಿ ಸಮಾನತೆ ಇರಬೇಕು ಎಂದು ನಾವು ಯಾವಾಗಲೂ ಮಾತನಾಡುತ್ತೇವೆ. ಆದರೆ ಭಾರತದ ಕ್ರಿಕೆಟ್‌ನಲ್ಲಿ ಇವತ್ತು ಇದು ಸಾಕಾರವಾಗಿದೆ. ನನಗೆ ಅಪಾರ ಸಂತಸವಾಗಿದೆ. ಇದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಭವಿಷ್ಯದಲ್ಲಿ ಬಹಳಷ್ಟು ಹುಡುಗಿಯರು ಕ್ರಿಕೆಟ್ ಆಟವನ್ನು ವೃತ್ತಿಯಾಗಿ ಸ್ವೀಕರಿಸಲು ಇದು ಪ್ರೇರಣೆಯಾಗಲಿದೆ’ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.
ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರೂ ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ‘ಲಿಂಗ ಸಮಾನತೆಯನ್ನು ತರಲು ಇದೊಂದು ಮಹತ್ವದ ಹೆಜ್ಜೆಯಾಗಿದೆ. ಕ್ರಿಕೆಟ್ ಆಟವು ಸಮಾನತೆಯನ್ನು ಮೂಡಿಸುವ ಮಹತ್ವದ ಮಾಧ್ಯಮವಾಗಿದೆ’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಮಾಜಿ ಆಟಗಾರ್ತಿ ಜೂಲನ್ ಗೋಸ್ವಾಮಿ, ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಬಾಲಿವುಡ್ ತಾರೆಯರಾದ ತಾಪ್ಸಿ ಪನ್ನು, ಶಾರೂಕ್ ಖಾನ್, ಅಭಿಷೇಕ್ ಬಚ್ಚನ್ ಅವರೂ ಬಿಸಿಸಿಐ ತೀರ್ಮಾನವನ್ನುಸ್ವಾಗತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.