ADVERTISEMENT

ಸಾಕಷ್ಟು ಬಾರಿ ಒಂಟಿತನ ಕಾಡಿದೆ: ವಿರಾಟ್ ಕೊಹ್ಲಿ

ತಮ್ಮ ಮಾನಸಿಕ ಒತ್ತಡದ ಬಗ್ಗೆ ಮಾತು

ಏಜೆನ್ಸೀಸ್
Published 18 ಆಗಸ್ಟ್ 2022, 21:46 IST
Last Updated 18 ಆಗಸ್ಟ್ 2022, 21:46 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ನವದೆಹಲಿ: ಸುದೀರ್ಘ ಅವಧಿಯಿಂದ ಫಾರ್ಮ್‌ ಕಂಡುಕೊಳ್ಳಲು ಪರದಾಡುತ್ತಿರುವ ಭಾರತ ತಂಡದ ಬ್ಯಾಟರ್‌ ವಿರಾಟ್‌ ಕೊಹ್ಲಿ, ‘ನನ್ನನ್ನು ಬೆಂಬಲಿಸುವ ಜನರು ಸುತ್ತಲು ಇದ್ದರೂ, ಒಂಟಿತನದ ಅನುಭವ ಉಂಟಾಗಿತ್ತು’ ಎಂದು ಹೇಳಿ ಕೊಂಡಿದ್ದಾರೆ.

ವೃತ್ತಿಜೀವನದಲ್ಲಿ ತಾವು ಎದುರಿಸಿದ ಒತ್ತಡ ಮತ್ತು ಅದರಿಂದ ಮಾನಸಿಕ ಆರೋಗ್ಯದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಅವರು ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

‘ನನ್ನನ್ನು ಬೆಂಬಲಿಸುವ ಮತ್ತು ತುಂಬಾ ಇಷ್ಟಪಡುವ ಜನರು ಕೊಠಡಿ ತುಂಬಾ ಇದ್ದರೂ, ಅವರ ನಡುವೆಯೇ ನನಗೆ ಒಂಟಿತನ ಕಾಡಿತ್ತು. ಇತರ ಸಾಕಷ್ಟು ಮಂದಿ ಇದೇ ರೀತಿಯ ಪರಿಸ್ಥಿತಿ ಎದುರಿಸಿರಬಹುದು ಎಂಬ ಭಾವನೆ ನನ್ನದು’ ಎಂದಿದ್ದಾರೆ.

ADVERTISEMENT

‘ಕ್ರೀಡಾಪಟುಗಳಿಗೆ ಎದುರಾಗುವ ನಿರಂತರ ಒತ್ತಡ, ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ. ಖಂಡಿತವಾಗಿಯೂ ಇದೊಂದು ಗಂಭೀರ ಸಮಸ್ಯೆ. ಎಲ್ಲ ಸಂದರ್ಭಗಳಲ್ಲೂ ನಾವು ಬಲಶಾಲಿಯಾಗಿ ನಿಲ್ಲ ಬೇಕೆಂದು ಬಯಸಿದರೂ, ಒತ್ತಡವು ನಿಮಗೆ ಹಿನ್ನಡೆ ಉಂಟುಮಾಡಬಲ್ಲದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕ್ರೀಡಾಪಟುಗಳು ಒತ್ತಡದಿಂದ ಹೊರಬರಲು ವಿಶ್ರಾಂತಿಯ ಮೊರೆಹೋಗಬೇಕು ಎಂಬ ಸಲಹೆ ಯನ್ನೂ ಅವರು ನೀಡಿದ್ದಾರೆ. 2014ರ ಇಂಗ್ಲೆಂಡ್‌ ಪ್ರವಾಸದ ಸಂದರ್ಭದಲ್ಲಿ ನಿರೀಕ್ಷೆಯಂತೆ ರನ್‌ ಗಳಿಸದೇ ಇದ್ದಾಗ ಖಿನ್ನತೆಗೆ ಒಳಗಾಗಿದ್ದೆ ಎಂಬುದನ್ನು ಕೊಹ್ಲಿ ಕೆಲ ತಿಂಗಳ ಹಿಂದೆ ಬಹಿರಂಗಪಡಿಸಿದ್ದರು. ಅದಾದ ಬಳಿಕ ತಾವು ಅನುಭವಿಸುತ್ತಿರುವ ಒತ್ತಡದ ಬಗ್ಗೆ ಅವರು ಮಾತನಾಡಿದ್ದು ಇದೇ ಮೊದಲು.

ಮುಂಬರುವ ಏಷ್ಯಾಕಪ್‌ ಟೂರ್ನಿಗೆ ಪ್ರಕಟಿಸಿರುವ ತಂಡದಲ್ಲಿ ಅವರಿಗೆ ಸ್ಥಾನ ನೀಡಲಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14 ವರ್ಷ ಪೂರ್ಣ
ಕೊಹ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಆ.18ಕ್ಕೆ ಹದಿನಾಲ್ಕು ವರ್ಷಗಳು ಪೂರ್ಣಗೊಂಡವು. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಶೇಷ ವಿಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ ಅವರು ಈ ಸಂಭ್ರಮವನ್ನು ಆಚರಿಸಿದ್ದಾರೆ.

‘14 ವರ್ಷಗಳ ಹಿಂದೆ ಈ ಪಯಣ ಆರಂಭವಾಯಿತು. ಇವೆಲ್ಲವೂ ಹೆಮ್ಮೆಯ ವಿಚಾರವಾಗಿದೆ’ ಎಂದು ವಿಡಿಯೊ ಜತೆ ಬರೆದುಕೊಂಡಿದ್ದಾರೆ. ಅವರ ವೃತ್ತಿಜೀವನದ ಸ್ಮರಣೀಯ ಗಳಿಗೆಯ ತುಣುಕುಗಳು ವಿಡಿಯೊದಲ್ಲಿದೆ.

ಕೊಹ್ಲಿ 2008ರ ಆ.18 ರಂದು ದಂಬುಲಾದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.