ADVERTISEMENT

ಸಮರ್ಥ್ –ರಾಬಿನ್ ಉತ್ತಪ್ಪ ಮುಖಾಮುಖಿ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕರ್ನಾಟಕ–ಕೇರಳ ಹಣಾಹಣಿ ಇಂದು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 18:21 IST
Last Updated 25 ಫೆಬ್ರುವರಿ 2021, 18:21 IST
ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ   

ಬೆಂಗಳೂರು: ಈ ಸಲದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನಲ್ಲಿ ಅತ್ಯಂತ ಕುತೂಹಲ ಕೆರಳಿಸುವ ನಿರೀಕ್ಷೆ ಇರುವ ಪಂದ್ಯವು ಶುಕ್ರವಾರ ನಡೆಯಲಿದೆ.

ಹಾಲಿ ಚಾಂಪಿಯನ್ ಕರ್ನಾಟಕ ತಂಡದ ನಾಯಕ ಆರ್‌. ಸಮರ್ಥ್‌ ಈಗ ಕೇರಳ ತಂಡವನ್ನು ಎದುರಿಸಬೇಕಿದೆ. ಸಚಿನ್ ಬೇಬಿ ನಾಯಕತ್ವದ ಕೇರಳ ತಂಡದಲ್ಲಿರುವ ಕನ್ನಡಿಗ ರಾಬಿನ್ ಉತ್ತಪ್ಪ ಅವರೇ ಸಮರ್ಥ್ ಬಳಗಕ್ಕೆ ದೊಡ್ಡ ಸವಾಲಾಗಲಿದ್ದಾರೆ.

ಸಮರ್ಥ್ ತಮ್ಮ ಈ ಹಳೆಯ 'ಗೆಳೆಯ‘ನನ್ನು ನಿಯಂತ್ರಿಸಲು ಯಾವ ರೀತಿಯ ಯೋಜನೆ ರೂಪಿಸಿದ್ದಾರೆನ್ನುವುದೂ ಕುತೂಹಲ ಮೂಡಿಸಿದೆ. ಕೆಲವು ವರ್ಷಗಳ ಹಿಂದೆ ಕರ್ನಾಟಕ ತಂಡದಲ್ಲಿ ಸಮರ್ಥ್ ಮತ್ತು ರಾಬಿನ್ ಜೊತೆಗೆ ಆಡಿದವರು. ಇದೀಗ ತಮ್ಮ ತವರಿನಂಗಳ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದಾರೆ.

ADVERTISEMENT

ಈ ಟೂರ್ನಿಯಲ್ಲಿ ರಾಬಿನ್ ಎರಡು ಶತಕ ಬಾರಿಸಿದ್ದಾರೆ. ಒಟ್ಟು 288 ರನ್‌ಗಳನ್ನು ಪೇರಿಸಿದ್ದಾರೆ. ಕೇರಳ ತಂಡವು ಪಾಯಿಂಟ್ಸ್‌ ಪಟ್ಟಿಯ ಅಗ್ರಸ್ಥಾನದಲ್ಲಿದೆ. ಆಡಿರುವ ಮೂರು ಪಂದ್ಯಗಳಲ್ಲಿಯೂ ಜಯಿಸಿದೆ. ಬಲಗೈ ಬ್ಯಾಟ್ಸ್‌ಮನ್‌ ಸಮರ್ಥ್ ಖಾತೆಯಲ್ಲಿ 221 ರನ್‌ಗಳಿವೆ. ಅದರಲ್ಲಿ ಒಂದು ಶತಕ ಮತ್ತು ಅರ್ಧಶತಕ ಇದೆ. ತಂಡವು ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, ಒಂದರಲ್ಲಿ ಸೋತಿದೆ. ಕೇರಳ ತಂಡವನ್ನು ಮಣಿಸಿದರೆ ಅಗ್ರಸ್ಥಾನಕ್ಕೇರುವ ಅವಕಾಶ ಆತಿಥೇಯರಿಗೆ ಲಭಿಸಲಿದೆ.

ಒಡಿಶಾ ಎದುರು ಶತಕ ಹೊಡೆದಿರುವ ದೇವದತ್ತ ಪಡಿಕ್ಕಲ್, ಉತ್ತಮ ಲಯದಲ್ಲಿರುವ ಕೆ.ವಿ. ಸಿದ್ಧಾರ್ಥ್, ಲಯ ಕಂಡುಕೊಳ್ಳಲು ಪರದಾಡುತ್ತಿರುವ ಕರುಣ್ ನಾಯರ್ ಅವರ ಮುಂದೆ ಕೇರಳದ ಎಸ್‌. ಶ್ರೀಶಾಂತ್ ಅವರನ್ನು ಎದುರಿಸುವ ಸವಾಲಿದೆ. ನಿಧೀಶ್, ಸಚಿನ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ.

ಬ್ಯಾಟಿಂಗ್‌ನಲ್ಲಿ ರಾಬಿನ್ ಜೊತೆಗೆ ವಿಷ್ಣು ವಿನೋದ್, ಸಂಜು ಸ್ಯಾಮ್ಸನ್, ಮೊಹಮ್ಮದ್ ಅಜರುದ್ದೀನ್ ಮತ್ತು ವತ್ಸಲ್ ಗೋವಿಂದ್ ಅವರನ್ನು ಕಟ್ಟಿಹಾಕುವ ಸವಾಲು ಆತಿಥೇಯ ಬೌಲರ್‌ಗಳಾದ ಅಭಿಮನ್ಯು ಮಿಥುನ್ ಬಳಗದ ಮುಂದೆ ಇದೆ. ಒಟ್ಟಿನಲ್ಲಿ ಈ ಪಂದ್ಯವು ರೋಚಕವಾಗುವ ಎಲ್ಲ ಲಕ್ಷಣಗಳೂ ಇವೆ.

ತಂಡಗಳು: ಕರ್ನಾಟಕ: ಆರ್. ಸಮರ್ಥ್ (ನಾಯಕ), ದೇವದತ್ತ ಪಡಿಕ್ಕಲ್, ಕೆ.ವಿ. ಸಿದ್ಧಾರ್ಥ್, ಕರುಣ್ ನಾಯರ್, ಅನಿರುದ್ಧ ಜೋಶಿ, ಅಭಿಮನ್ಯು ಮಿಥುನ್, ಜೆ. ಸುಚಿತ್, ಬಿ.ಆರ್. ಶರತ್ (ವಿಕೆಟ್‌ಕೀಪರ್), ಶ್ರೇಯಸ್ ಗೋಪಾಲ್, ವೈಶಾಖ ವಿಜಯಕುಮಾರ್, ಪ್ರಸಿದ್ಧಕೃಷ್ಣ, ರೋನಿತ್ ಮೋರೆ, ಡೇಗಾ ನಿಶ್ಚಲ್, ರೋಹನ್ ಕದಂ, ಆದಿತ್ಯ ಸೋಮಣ್ಣ, ಎಂ.ಬಿ. ದರ್ಶನ್, ನಿಕಿನ್ ಜೋಸ್, ಶಿವಕುಮಾರ್ ರಕ್ಷಿತ್, ಕೆ.ಎಲ್. ಶ್ರೀಜಿತ್, ಮನೋಜ್ ಎಸ್. ಭಾಂಡಗೆ, ಶುಭಾಂಗ್ ಹೆಗಡೆ.

ಕೇರಳ: ಸಚಿನ್ ಬೇಬಿ (ನಾಯಕ), ರಾಬಿನ್ ಉತ್ತಪ್ಪ, ವಿಷ್ಣು ವಿನೋದ್, ಮೊಹಮ್ಮದ್ ಅಜರುದ್ದೀನ್, ವತ್ಸಲ್ ಗೋವಿಂದ್, ಕಳ್ಳಿಪರಂಬಿಲ್ ರೋಜಿತ್, ಜಲಜ್ ಸಕ್ಸೆನಾ, ಎಂ.ಡಿ. ನಿಧೀಶ್, ಎಸ್. ಶ್ರೀಶಾಂತ್, ಎನ್‌.ಪಿ. ಬಾಸಿಲ್, ವಿನೂಪ್ ಮನೋಹರನ್, ಅಕ್ಷಯ್ ಚಂದ್ರನ್, ಸಲ್ಮಾನ್ ನೈಜರ್, ರೋಹನ್ ಕುನ್ಉಮೈ, ಸಿಜೊಮನ್ ಜೋಸೆಫ್, ಸುದೇಷ್ಣ ಮಿಥುನ್.

ಪಂದ್ಯ ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.