ADVERTISEMENT

ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್: ಆಟಗಾರರ ಕುಟುಂಬ ತೆರಳುವಂತಿಲ್ಲ

ಪಿಟಿಐ
Published 13 ಫೆಬ್ರುವರಿ 2025, 13:54 IST
Last Updated 13 ಫೆಬ್ರುವರಿ 2025, 13:54 IST
<div class="paragraphs"><p>ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್&nbsp; </p></div>

ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ 

   

 –ಪಿಟಿಐ ಚಿತ್ರ

ನವದೆಹಲಿ: ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ಆಟಗಾರರು ತಮ್ಮೊಂದಿಗೆ ಕುಟುಂಬದ ಸದಸ್ಯರನ್ನು ಕರೆದೊಯ್ಯುವಂತಿಲ್ಲ. ಇದೇ 15ರಂದು ತಂಡವು ಪ್ರಯಾಣಿಸಲಿದೆ. 

ADVERTISEMENT

ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಹೀನಾಯವಾಗಿ ಸೋತಿತ್ತು. ಆದ್ದರಿಂದ ಪ್ರಯಾಣದ ನಿಯಮಾವಳಿಯನ್ನು ಬಿಸಿಸಿಐ ಪರಿಷ್ಕರಿಸಿತ್ತು. ಅದರ ನಂತರ ಭಾರತ ತಂಡವು ಹೊರದೇಶಕ್ಕೆ ಪ್ರಯಾಣ ಮಾಡುತ್ತಿರುವ ಮೊದಲ ಟೂರ್ನಿ ಇದಾಗಿದೆ.

ಫೆಬ್ರುವರಿ 20ರಂದು ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. 23ರಂದು ಬದ್ಧ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಆಡಲಿದೆ. ಮಾರ್ಚ್ 2ರಂದು ನ್ಯೂಜಿಲೆಂಡ್ ತಂಡವನ್ನು ಭಾರತ ಎದುರಿಸುವುದು. ಫೈನಲ್ ಪಂದ್ಯವೂ ಸೇರಿದಂತೆ ಒಟ್ಟು 3 ವಾರಗಳ ಅವಧಿಯ ಪ್ರವಾಸ ಇದಾಗಿದೆ. 

ಮಂಡಳಿಯು ರೂಪಿಸಿರುವ ಹೊಸ ನಿಯಮದ ಪ್ರಕಾರ; 45 ದಿನಗಳಿಗಿಂತ ಹೆಚ್ಚಿನ ಅವಧಿಯ ಪ್ರವಾಸವಿದ್ದಾಗ ಆಟಗಾರರು ತಮ್ಮ ಕುಟುಂಬದವರನ್ನು ಗರಿಷ್ಠ ಎರಡು ವಾರಗಳ ಅವಧಿಗೆ ಕರೆದೊಯ್ಯಲು ಅವಕಾಶವಿದೆ. 

‘ನಿಯಮಗಳು ಬದಲಾವಣೆಯಾದರೆ ಅದು ಬೇರೆ ವಿಷಯ. ಆದರೆ, ಸದ್ಯದ ಮಟ್ಟಿಗೆ ಜಾರಿಯಲ್ಲಿರುವ ನಿಯಮದಂತೆ ಆಟಗಾರರು ತಮ್ಮ ಪತ್ನಿ ಅಥವಾ ಸಂಗಾತಿಯೊಂದಿಗೆ ಈ ಪ್ರವಾಸದಲ್ಲಿ ಹೋಗುವಂತಿಲ್ಲ. ಈ  ಪ್ರವಾಸವು ಒಂದು ತಿಂಗಳಿಗಿಂತ ಕಡಿಮೆ ಅವಧಿಯದ್ದಾಗಿದೆ. ಆದ್ದರಿಂದ ಕುಟುಂಬದ ಸದಸ್ಯರು ಆಟಗಾರರ ಜೊತೆಗೆ ಹೋಗುವಂತಿಲ್ಲ. ಒಂದೊಮ್ಮೆ ವಿಶೇಷ ಅಥವಾ ಅನಿವಾರ್ಯ ಸಂದರ್ಭವಿದ್ದರೆ ಆಟಗಾರರೇ ತಮ್ಮ ಕುಟುಂಬದ ಪ್ರಯಾಣ ಮತ್ತಿತರ ವೆಚ್ಚ ಭರಿಸಬೇಕು’  ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇದಲ್ಲದೇ ಇನ್ನು ಕೆಲವು ನಿಯಮಗಳನ್ನು ಈಗಾಗಲೇ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಪಂದ್ಯಗಳ ಸಂದರ್ಭದಲ್ಲಿ ಯಾವುದೇ ಆಟಗಾರರೂ ವೈಯಕ್ತಿಕ ವಾಹನಗಳಲ್ಲಿ ಪ್ರಯಾಣಿಸುವಂತಿಲ್ಲ.  ತಂಡದ ಬಸ್‌ನಲ್ಲಿ ಪ್ರಯಾಣ ಮಾಡುವುದು ಕಡ್ಡಾಯ.

ಆಟಗಾರರ ವೈಯಕ್ತಿಕ ಕೋಚ್, ಮ್ಯಾನೇಜರ್, ಬಾಣಸಿಗ ಅಥವಾ ಪ್ರತಿನಿಧಿಗಳಿದ್ದರೆ ಪ್ರತ್ಯೇಕ ಹೋಟೆಲ್‌ಗಳಲ್ಲಿ ತಂಗಬೇಕು. ಆಟಗಾರರೊಂದಿಗೆ ವಸತಿ ಹಂಚಿಕೊಳ್ಳುವಂತಿಲ್ಲ. ಈ ಹಿಂದೆ ತಂಡದ ತರಬೇತಿ ಸಿಬ್ಬಂದಿಯೊಬ್ಬರ ವೈಯಕ್ತಿಕ ಕಾರ್ಯದರ್ಶಿಯೊಬ್ಬರು ಟೀಮ್ ಹೋಟೆಲ್‌ನಲ್ಲಿಯೇ ಇರುತ್ತಿದ್ದರು. ಆದರೆ ಈಗ ಅವರೂ ಬೇರೆ ಕಡೆ ವಸತಿ ವ್ಯವಸ್ಥೆ ಮಾಡಿಕೊಳ್ಳಬೇಕು.  ಆದರೆ ಅವರು ಭಾರತದಲ್ಲಿಯೇ ನಡೆದಿದ್ದ ಇಂಗ್ಲೆಂಡ್ ಎದುರಿನ ಸರಣಿಯ ಸಂದರ್ಭದಲ್ಲಿ  ಎಲ್ಲ ತಾಣಗಳಲ್ಲಿಯೂ ಕಾಣಿಸಿಕೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.