ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಫಾರೂಕ್ ಇಂಜಿನಿಯರ್ ಮತ್ತು ಕ್ಲೈವ್ ಲಾಯ್ಡ್
–ಟ್ವಿಟರ್ ಚಿತ್ರ
ಮ್ಯಾಂಚೆಸ್ಟರ್: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ಕೀಪರ್ ಫಾರೂಕ್ ಇಂಜಿನಿಯರ್ ಮತ್ತು ವೆಸ್ಟ್ ಇಂಡೀಸ್ ದಿಗ್ಗಜ ಸರ್ ಕ್ಲೈವ್ ಲಾಯ್ಡ್ ಅವರ ಹೆಸರುಗಳನ್ನು ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಇಡಲಾಯಿತು.
ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನವಾದ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ದಿಗ್ಗಜರನ್ನು ಗೌರವಿಸಲಾಯಿತು.
ಸ್ಥಳೀಯ ತಂಡವಾದ ಲ್ಯಾಂಕಶೈರ್ ಕೌಂಟಿ ಕ್ಲಬ್‌ನಲ್ಲಿ ಫಾರೂಕ್ ಅವರು 1968 ರಿಂದ 1976ರವರೆಗೆ ಆಡಿದ್ದರು. 5942 ರನ್ ಗಳಿಸಿದ್ದರು. 429 ಕ್ಯಾಚ್ ಮತ್ತು 35 ಸ್ಟಂಪಿಂಗ್‌ಗಳನ್ನು ಮಾಡಿದ್ದರು. ಅವರ ಉತ್ತಮ ಆಟದ ಬಲದಿಂದ ಲ್ಯಾಂಕಶೈರ್ ಕ್ಲಬ್ ತಂಡಕ್ಕೆ 15 ವರ್ಷಗಳ ಪ್ರಶಸ್ತಿ ಬರ ನೀಗಿತ್ತು. ತಂಡವು 1970 ರಿಂದ 1975ರ ಅವಧಿಯಲ್ಲಿ ನಾಲ್ಕು ಸಲ ಜಿಲೆಟ್ ಕಪ್ ಗೆದ್ದಿತ್ತು.
ಕ್ಲೈವ್ ಲಾಯ್ಡ್ ಅವರ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡವು ಎರಡು ಬಾರಿ ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿತ್ತು. 1970ರಲ್ಲಿ ಅವರು ಲ್ಯಾಂಕಶೈರ್ ತಂಡವನ್ನೂ ಪ್ರತಿನಿಧಿಸಿದ್ದರು. ದಶಕದ ಕಾಲ ಅವರು ತಂಡಕ್ಕೆ ತಮ್ಮ ಕಾಣಿಕೆ ನೀಡಿದ್ದರು.
ಫಾರೂಕ್ ಅವರಿಗೆ ಈಗ 87 ವರ್ಷ ವಯಸ್ಸಾಗಿದ್ದು, ನಿವೃತ್ತಿಯ ನಂತರ ಅವರು ಮ್ಯಾಂಚೆಸ್ಟರ್‌ನಲ್ಲಿ ನೆಲೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.