ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಣ ಆಯೋಜನೆಯಾಗುವ ಟೆಸ್ಟ್ ಕ್ರಿಕೆಟ್ ಸರಣಿಯ ಪಟೌಡಿ ಟ್ರೋಫಿಯನ್ನು ಮರುನಾಮಕರಣ ಮಾಡಲು ಹೊರಟಿದ್ದು ಅಚ್ಚರಿ ಮೂಡಿಸಿದೆ. ಇದೊಂದು ವಿಚಿತ್ರ ಎಂದು ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಲ್‌ರೌಂಡರ್ ಕಪಿಲ್ ದೇವ್ ಹೇಳಿದರು.
ಇದೇ 20ರಿಂದ ಇಂಗ್ಲೆಂಡ್ ಆತಿಥ್ಯದಲ್ಲಿ ಸರಣಿ ಆರಂಭವಾಗಲಿದೆ. ಗೆದ್ದವರಿಗೆ ನೀಡುವ ಪಟೌಡಿ ಟ್ರೋಫಿಯನ್ನು ಮರುನಾಮಕರಣ ಮಾಡುವ ಪ್ರಸ್ತಾವ ಇತ್ತು. ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿಯೆಂದು ಮರುನಾಮಕರಣ ನೀಡುವ ಕುರಿತು ನಿರ್ಧರಿಸಲಾಗಿತ್ತು.
‘ಈ ನಿರ್ಧಾರ ಒಂಚೂರು ವಿಚಿತ್ರ ಎನಿಸಿತು. ಹೆಸರು ಬದಲಾವಣೆಯಿಂದ ಏನಾಗುತ್ತದೆ? ಕ್ರಿಕೆಟ್‌ನಲ್ಲಿ ಎಲ್ಲವೂ ನಡೆಯುತ್ತದೆ. ಕ್ರಿಕೆಟ್ ಬದಲಾಗುವುದಿಲ್ಲ. ಅದು ಕ್ರಿಕೆಟ್ ಆಗಿಯೇ ಇರುತ್ತದೆ’ ಎಂದು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು. 1983ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಕಪಿಲ್ ದೇವ್ ಅವರು ಅಜೇಯ 175 ರನ್ ಹೊಡೆದು 42 ವರ್ಷಗಳು ತುಂಬಿದ ದಿನದ ನೆನಪಿಗಾಗಿ ‘ತ್ರಿ ಸಿಕ್ಸ್ಟಿ’ ಸಂಸ್ಥೆಯು ಈ ಕಾರ್ಯಕ್ರಮ ಆಯೋಜಿಸಿತ್ತು. ಟನ್‌ಬ್ರಿಜ್‌ನಲ್ಲಿ ನಡೆದಿದ್ದ ಆ ಪಂದ್ಯವು ಭಾರತ ತಂಡವು 17 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆಗ ಕ್ರೀಸ್‌ಗೆ ಬಂದಿದ್ದ ಕಪಿಲ್ ಅವರ ಬ್ಯಾಟಿಂಗ್‌ನಿಂದಾಗಿ ತಂಡದ ಮೊತ್ತವು 266 ರನ್ ಆಯಿತು. ನಂತರ ನಡೆದಿದ್ದು ಇತಿಹಾಸದ ಪುಟಗಳಲ್ಲಿ ಬಂಗಾರದ ಅಕ್ಷರಗಳಲ್ಲಿ ದಾಖಲಾಯಿತು. ಆ ವರ್ಷ ಭಾರತ ಟ್ರೋಫಿಗೆ ಮುತ್ತಿಟ್ಟಿತ್ತು.
ಶುಭಮನ್ ಗಿಲ್ ನಾಯಕತ್ವದ ಕುರಿತು ಪ್ರತಿಕ್ರಿಯಿಸಿದ ಅವರು, ‘ಯಾವುದೇ ಅತಿಯಾದ ನಿರೀಕ್ಷೆಗಳು ಬೇಡ. ಹೋಗಿ, ಆಡಿ, ನಿಮ್ಮ ಸಾಮರ್ಥ್ಯ ತೋರಿಸಿ. ಅದೇ ಮುಖ್ಯವಾಗುತ್ತದೆ’ ಎಂದು ಸಲಹೆ ನೀಡಿದರು.
‘ನಾನು ಆಡುವ ದಿನಗಳಲ್ಲಿದ್ದ ಬಹಳಷ್ಟು ಸಲಕರಣೆಗಳನ್ನು ಇಟ್ಟುಕೊಂಡಿಲ್ಲ. ಆದರೆ ಈ ಬ್ಯಾಟ್ ಮಾತ್ರ ನನ್ನ ಬಳಿ ಇದೆ. ಇದು ನನ್ನ ಮಗಳ ಪ್ರೀತಿಯ ಬ್ಯಾಟ್’ ಎಂದು ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಬಳಸಿದ್ದ ಬ್ಯಾಟ್ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.