ADVERTISEMENT

ಸರಣಿ ಕಿರೀಟಕ್ಕಾಗಿ ಹೋರಾಟ: ತವರಿನಲ್ಲಿ ಮಿಂಚುವರೇ ಶಿಖರ್‌, ವಿರಾಟ್, ರಿಷಭ್‌

ಕೋಟ್ಲಾದಲ್ಲಿ ಭಾರತ–ಆಸ್ಟ್ರೇಲಿಯಾ ಕದನ ಕುತೂಹಲ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 19:56 IST
Last Updated 12 ಮಾರ್ಚ್ 2019, 19:56 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ನವದೆಹಲಿ: ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್..

ಈ ಮೂವರಿಗೂ ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣವೇ ತವರುಮನೆ. ಮೂರು ದಿನಗಳ ಹಿಂದೆ ಮೊಹಾಲಿಯಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಭಾರತವು 358 ರನ್‌ಗಳ ದೊಡ್ಡ ಮೊತ್ತ ಗಳಿಸಲು ಶಿಖರ್ ಧವನ್ ಶತಕ ಕಾರಣವಾಗಿತ್ತು. ಆದರೆ, ಮಹೇಂದ್ರಸಿಂಗ್ ಧೋನಿ ವಿಶ್ರಾಂತಿ ಪಡೆದಿದ್ದರಿಂದ ಆಡಿದ್ದ ರಿಷಭ್ ಪಂತ್ ವಿಕೆಟ್‌ಕೀಪಿಂಗ್‌ನಲ್ಲಿ ಮಾಡಿದ ಎಡವಟ್ಟುಗಳೂ ಸೋಲಿಗೆ ಕಾರಣವಾಗಿದ್ದವು. ಇದೀಗ ರಿಷಭ್ ತಮ್ಮ ಮೇಲೆ ಬಿದ್ದಿರುವ ಕೆಂಗಣ್ಣುಗಳಿಗೆ ತಂಪು ಅನುಭವ ನೀಡುವಂತಹ ಆಟವನ್ನು ಆಡುವ ಒತ್ತಡದಲ್ಲಿದ್ದಾರೆ.

ಆದರೆ ನಾಯಕ ವಿರಾಟ್ ಕೊಹ್ಲಿ ವೈಯಕ್ತಿಕವಾಗಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಆದರೆ, ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಬೀಗುತ್ತಿದ್ದ ಆತಿಥೇಯರಿಗೆ ನಂತರದ ಎರಡು ಪಂದ್ಯಗಳಲ್ಲಿ ಆ್ಯರನ್ ಫಿಂಚ್ ಬಳಗವು ತಿರುಗೇಟು ನೀಡಿತ್ತು. ಇದರಿಂದಾಗಿ 2–2 ರಿಂದ ಸಮಬಲ ಸಾಧಿಸಿತ್ತು. ಇದು ಸಹಜವಾಗಿಯೇ ಕೊಹ್ಲಿಯ ಒತ್ತಡ ಹೆಚ್ಚಿಸಿದೆ.

ADVERTISEMENT

ತಮ್ಮ ಬಾಲ್ಯ ಕಳೆದ ಅಂಗಳದಲ್ಲಿ ಒಂದು ಏಕದಿನ ಪಂದ್ಯ ಗೆಲ್ಲುವ ಆಸೆಯನ್ನು ಈಡೇರಿಸಿಕೊಳ್ಳುವ ಒತ್ತಡದಲ್ಲಿಯೂ ಅವರಿದ್ದಾರೆ. ಮೂರು ವರ್ಷದ ಹಿಂದೆ ಇಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಕೊಹ್ಲಿ ಮೊದಲ ಬಾರಿ ನಾಯಕ ರಾಗಿ ಕಣಕ್ಕಿಳಿದಿದ್ದರು. ಆದರೆ ಅವರ ತಂಡವು ಸೋಲನುಭವಿಸಿತ್ತು. ಈಗ ಇನ್ನೊಂದು ಅವಕಾಶ ಒಲಿದು ಬಂದಿದೆ.ಆದರೆ, ಸುಲಭ ಗೆಲುವಿನ ಕನಸು ಕಾಣುವ ಪರಿಸ್ಥಿತಿಯಲ್ಲಿ ಕೊಹ್ಲಿಯಾಗಲೀ, ಭಾರತದ ಕ್ರಿಕೆಟ್‌ ಅಭಿಮಾನಿಗಳಾಗಲೀ ಇಲ್ಲ. ಏಕೆಂದರೆಆಸ್ಟ್ರೇಲಿಯಾ ತಂಡವು 2009ರಲ್ಲಿ ಭಾರತಕ್ಕೆ ಬಂದಿದ್ದಾಗ 2–0ಯಿಂದ ಸರಣಿ ಗೆದ್ದಿತ್ತು. ನಂತರ ಈಗ ಮತ್ತೊಂದು ಗೆಲುವಿನ ಹೊಸ್ತಿಲಲ್ಲಿದೆ. ಇಂತಹ ಅವಕಾಶವನ್ನು ಸುಲಭವಾಗಿ ಬಿಟ್ಟುಕೊಡುತ್ತದೆಯೇ?

ಮೊಹಾಲಿ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಎಲ್ಲವೂ ಸರಿಯಾಗಿತ್ತು. ಆರಂಭಿಕ ಜೋಡಿಯ ಆಟ ರಂಗೇರಿತ್ತು. ಶಿಖರ್ ಶತಕ ಮತ್ತು ರೋಹಿತ್ ಹೊಡೆದ 95 ರನ್‌ಗಳು ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದವು. ಅಂಬಟಿ ರಾಯುಡು ಬದಲಿಗೆ ಸ್ಥಾನ ಪಡೆದು ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ ಗೆ ಇಳಿದಿದ್ದ ರಾಹುಲ್ ದೊಡ್ಡ ಇನಿಂಗ್ಸ್ ಆಡಲಿಲ್ಲ.

ಆದರೆ, ಅವರಿಗೆ ಇನ್ನೊಂ ದು ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ರಿಷಭ್ ತಮ್ಮ ಬ್ಯಾಟಿಂಗ್ ಜೊತೆಗೆ ಕೀಪಿಂಗ್‌ನಲ್ಲಿಯೂ ಚುರು ಕುತನ ಮತ್ತು ಶಿಸ್ತುಗಳನ್ನು ತೋರಿಸುವ ಅಗತ್ಯ ವಿದೆ. ಇಲ್ಲದಿದ್ದರೆ ಅವರು ’ವಿಶ್ವ ಕಪ್‌ ಟೂರ್ನಿಯಲ್ಲಿ ಆಡುವ ಅವಕಾಶಕ್ಕೂ ಕುತ್ತು ಬರಬಹುದು. ಆದರೆ, ಮೊಹಾಲಿಯಲ್ಲಿ ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಳ್ಳಲು ಆದ್ಯತೆ ನೀಡುವತ್ತ ಚಿತ್ತ ನೆಟ್ಟಿದೆ.

ಸ್ವಲ್ಪ ಸಡಿಲವಾದ ಆಟವಾಡಿದರೂ ಅದನ್ನು ಆಸ್ಟ್ರೇಲಿಯಾ ಯಾವ ರೀತಿ ಬಳಸಿಕೊಳ್ಳುತ್ತದೆ ಎಂಬುದನ್ನು ಹೋದ ಪಂದ್ಯದಲ್ಲಿ ಶತಕ ಹೊಡೆದ ಪೀಟರ್‌ ಹ್ಯಾಂಡ್ಸ್‌ಕಂಬ್ ಮತ್ತು ಆರನೇ ಕ್ರಮಾಂಕದಲ್ಲಿ ಬಂದು 43 ಎಸೆತಗಳಲ್ಲಿ 84 ರನ್‌ಗಳನ್ನು ಸೂರೆ ಮಾಡಿದ್ದ ಆ್ಯಷ್ಟನ್ ಟರ್ನರ್ ತೋರಿಸಿಕೊಟ್ಟಿದ್ದರು. ಉಸ್ಮಾನ್ ಖ್ವಾಜಾ ಕೂಡ ಉತ್ತಮ ಲಯದಲ್ಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಅಪಾಯಕಾರಿ ಬ್ಯಾಟ್ಸ್‌ಮನ್.

ಬೌಲಿಂಗ್‌ನಲ್ಲಿ ಪ್ಯಾಟ್ ಕಮಿನ್ಸ್, ಸ್ಪಿನ್ನರ್ ಆ್ಯಡಂ ಜಂಪಾ ಅವರು ಮತ್ತೊಮ್ಮೆ ಆತಿಥೇಯರಿಗೆ ತಲೆನೋವು ನೀಡಿದರೆ ಅಚ್ಚರಿಯೇನಿಲ್ಲ. ಅದರಿಂದಾಗಿ ಭಾರತ ತಂಡಕ್ಕೆ ‘ಆಲ್‌ರೌಂಡ್’ ಆಟವೊಂದೇ ಗೆಲುವಿನ ದಾರಿ ತೋರಿಸಬಲ್ಲದು.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ರಿಷಭ್ ಪಂತ್ (ವಿಕೆಟ್‌ಕೀಪರ್), ಕೇದಾರ್ ಜಾಧವ್, ವಿಜಯಶಂಕರ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅಂಬಟಿ ರಾಯುಡು.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಉಸ್ಮಾನ್ ಖ್ವಾಜಾ, ಪೀಟರ್ ಹ್ಯಾಂಡ್ಸ್‌ಕಂಬ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಆ್ಯಷ್ಟನ್ ಟರ್ನರ್, ಜೈ ರಿಚರ್ಡ್ಸನ್, ಆ್ಯಡಂ ಜಂಪಾ, ಆ್ಯಂಡ್ರ್ಯೂ ಟೈ, ಪ್ಯಾಟ್ ಕಮಿನ್ಸ್, ನೇಥನ್ ಕೌಲ್ಟರ್‌ನೈಲ್, ಅಲೆಕ್ಸ್ ಕ್ಯಾರಿ, ನೇಥನ್ ಲಯನ್, ಜೇಸನ್ ಬೆಹ್ರನ್‌ಡ್ರಾಫ್.

**
ಎದುರಾಳಿ ತಂಡದ ಐದು ವಿಕೆಟ್‌ಗಳು ಪತನವಾದ ಮೇಲೆ ಪ್ರತಿ ಓವರ್‌ಗೆ 10ರ ಸರಾಸರಿಯಲ್ಲಿ ರನ್‌ ಗಳನ್ನು ಬಿಟ್ಟುಕೊಟ್ಟಿದ್ದು ಅಕ್ಷಮ್ಯ. ಆ ಲೋಪವನ್ನು ತಿದ್ದಿಕೊಂಡು ಕಣಕ್ಕಿಳಿಯಲಿದ್ದೇವೆ.
–ವಿರಾಟ್ ಕೊಹ್ಲಿ, ಭಾರತದ ನಾಯಕ

**
ಭಾರತದಲ್ಲಿ ಸರಣಿ ಗೆಲ್ಲುವುದು ದೊಡ್ಡ ಸಾಧನೆಯೇ ಸರಿ. ಮುಂದೆ ಯುಎಇಯಲ್ಲಿ ಪಾಕಿಸ್ತಾನ ವಿರುದ್ಧ ನಮ್ಮ ತಂಡ ಸರಣಿ ಆಡಲಿದೆ. ಇಲ್ಲಿ ಗೆಲ್ಲುವುದರಿಂದ ಆ ಸರಣಿಯಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ.
–ಆ್ಯಷ್ಟನ್ ಟರ್ನರ್, ಆಸ್ಟ್ರೇಲಿಯಾ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.