ADVERTISEMENT

ಚಾಣಾಕ್ಷ ನಾಯಕ; ಒಳ್ಳೆಯ ವ್ಯಕ್ತಿ

ಅಜಿತ್‌ ವಾಡೇಕರ್‌ ಜೊತೆಗಿನ ಒಡನಾಟ ಸ್ಮರಿಸಿದ ಸ್ಪಿನ್ ಮಾಂತ್ರಿಕ ಬಿ.ಎಸ್‌. ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2018, 19:30 IST
Last Updated 16 ಆಗಸ್ಟ್ 2018, 19:30 IST
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ಅವರ ನಿಧನಕ್ಕೆ ಗುರುವಾರ ವಿರಾಟ್ ಕೊಹ್ಲಿ ನಾಯಕತ್ವದ ಕ್ರಿಕೆಟ್ ತಂಡವು ಒಂದು ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಿತು. ನಂತರ ಅಭ್ಯಾಸ ನಡೆಸಿತು -ಪಿಟಿಐ ಚಿತ್ರ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ಅವರ ನಿಧನಕ್ಕೆ ಗುರುವಾರ ವಿರಾಟ್ ಕೊಹ್ಲಿ ನಾಯಕತ್ವದ ಕ್ರಿಕೆಟ್ ತಂಡವು ಒಂದು ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಿತು. ನಂತರ ಅಭ್ಯಾಸ ನಡೆಸಿತು -ಪಿಟಿಐ ಚಿತ್ರ   

ಬೆಂಗಳೂರು: ‘ಅಮೋಘ ಆಟಗಾರ ಮತ್ತು ಚಾಣಾಕ್ಷ ನಾಯಕರಾಗಿದ್ದವರು ಅಜಿತ್ ವಾಡೇಕರ್. ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿದ್ದು ತಡವಾಗಿ. ಅವರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಬಹಳ ಮುಂಚೆಯೇ ಭಾರತಕ್ಕೆ ಆಡಬೇಕಿತ್ತು’– 1971ರಲ್ಲಿ ಇಂಗ್ಲೆಂಡ್ ತಂಡವನ್ನು ಅದರ ತವರಿನಲ್ಲಿಯೇ ಹಣಿದು ಟೆಸ್ಟ್ ಸರಣಿ ಗೆದ್ದ ಭಾರತ ತಂಡದ ನಾಯಕ ಅಜಿತ್ ವಾಡೇಕರ್ ಅವರ ತಂಡದಲ್ಲಿದ್ದ ಕನ್ನಡಿಗ ಬಿ.ಎಸ್‌. ಚಂದ್ರಶೇಖರ್ ಅವರ ಮಾತುಗಳಿವು.

‘ಕ್ರಿಕೆಟ್‌ ಜನಕರ ನಾಡು ಇಂಗ್ಲೆಂಡ್‌ ಅನ್ನು ಮೊದಲ ಬಾರಿಗೆ ಅವರ ಅಂಗಳ ದಲ್ಲಿ ಮಣಿಸಿದ ಆ ಸಾಧನೆಯಲ್ಲಿ ಸ್ಪಿನ್ನರ್ ಚಂದ್ರಶೇಖರ್ ಅವರ ಪಾತ್ರ ಮಹತ್ವದ್ದಾಗಿತ್ತು. ಬುಧವಾರ ರಾತ್ರಿ ನಿಧನರಾದ ವಾಡೇಕರ್ ಅವರೊಂದಿಗಿನ ತಮ್ಮ ಒಡ ನಾಟದ ನೆನಪುಗಳನ್ನು ಚಂದ್ರ ಶೇಖರ್ ಅವರು ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡಿದ್ದಾರೆ.‘ಅವರು ಭಾರತ ತಂಡಕ್ಕೆ ಆಯ್ಕೆ ಯಾಗಿದ್ದು ಸ್ವಲ್ಪ ತಡವಾಯಿತು ಅಂದುಕೊಳ್ಳುತ್ತೇನೆ. ಅವರಿಗೆ ಬಹಳ ಮುಂಚೆಯೇ ಅವಕಾಶ ಸಿಗಬೇಕಿತ್ತು. ಉತ್ತಮ ಆಟಗಾರ ಮತ್ತು ನಾಯಕತ್ವದ ಗುಣಗಳು ಅವರಲ್ಲಿದ್ದವು. ನಿವೃತ್ತಿಯ ನಂತರವೂ ಅವರು ಹಲವು ಉತ್ತಮ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಇದೀಗ ಒಬ್ಬ ಉತ್ತಮ ಕ್ರಿಕೆಟಿಗ ಮತ್ತು ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ’ ಎಂದರು.

‘ನಾವು ಆಡುವಾಗ ಈಗಿನಷ್ಟೆಲ್ಲ ವ್ಯವಸ್ಥೆಗಳು ಏನೂ ಇರಲಿಲ್ಲ. ಪಂದ್ಯದಲ್ಲಿ ಜಯಿಸಲು ಸಂದರ್ಭಕ್ಕೆ ತಕ್ಕಂತೆ ತಂಡವನ್ನು ಮುನ್ನಡೆಸುವ ಚಾಣಾಕ್ಷತೆ ಮತ್ತು ಧೈರ್ಯ ಅಜಿತ್‌ ಅವರಿಗಿತ್ತು. ನೇರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ವಿಶ್ರಾಂತಿಯ ಸಮಯದಲ್ಲಿ ಎಲ್ಲರೊಂದಿಗೂ ಕುಳಿತು ಮಾತನಾಡುತ್ತಿದ್ದರು. ವಿದೇಶಗಳಲ್ಲಿ ಪ್ರವಾಸಕ್ಕೆ ಹೋದಾಗಲೂ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಹೊರಗೆ ಸುತ್ತಾಡಲು ಹೋಗುವಾಗ ಎಲ್ಲರನ್ನೂ ಕರೆದು ಕೊಂಡು ಹೋಗುತ್ತಿದ್ದರು’ ಎಂದು ನೆನಪಿಸಿಕೊಂಡರು.

ADVERTISEMENT

‘ಅವರ ಆಟದ ಶೈಲಿ ಬಹಳ ಆಕರ್ಷಕವಾಗಿತ್ತು. ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದ ಅವರ ಕಲಾತ್ಮಕ ಹೊಡೆತಗಳು ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇವೆ. ಸುಂದರವಾದ ಸ್ಟ್ರೋಕ್‌ಗಳು, ಚುರುಕಾದ ಪಾದಚಲನೆ ಮೂಲಕ ಎದುರಾಳಿ ಬೌಲರ್‌ಗಳನ್ನು ಎದುರಿಸುತ್ತಿದ್ದರು. ಆಗ ವೆಸ್ಟ್‌ ಇಂಡೀಸ್ ಮತ್ತು ಇಂಗ್ಲೆಂಡ್‌ನ ಉತ್ತಮ ಬೌಲರ್‌ಗಳ ಎದುರು ದಿಟ್ಟತನದಿಂದ ಆಡುತ್ತಿದ್ದರು’ ಎಂದು ಚಂದ್ರಶೇಖರ್ ಸ್ಮರಿಸಿಕೊಳ್ಳುತ್ತಾರೆ.

1971ರಲ್ಲಿ ಭಾರತ – ಇಂಗ್ಲೆಂಡ್ ನಡುವಣ ಮೂರು ಟೆಸ್ಟ್‌ಗಳ ಸರಣಿ ನಡೆದಿತ್ತು. ಅದರಲ್ಲಿ ಮೊದಲ ಎರಡು ಪಂದ್ಯಗಳು ಡ್ರಾ ಆಗಿದ್ದವು. ಮೂರನೇ ಪಂದ್ಯದಲ್ಲಿ ಭಾರತವು 4 ವಿಕೆಟ್‌ಗಳಿಂದ ಗೆದ್ದಿತ್ತು. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಚಂದ್ರಶೇಖರ್ ಅವರು ಎರಡು ಮತ್ತು ಎರಡನೇ ಇನಿಂಗ್ಸ್‌ನಲ್ಲಿ 38ಕ್ಕೆ6 ವಿಕೆಟ್‌ಗಳನ್ನು ಗಳಿಸಿದ್ದರು. ಇದರಿಂದಾಗಿ ರೇ ಇಲ್ಲಿಂಗ್‌ವರ್ಥ್ ನಾಯಕತ್ವದ ಇಂಗ್ಲೆಂಡ್ ತಂಡವು ಸೋಲನುಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.