ನವದೆಹಲಿ: ಅನಾರೋಗ್ಯದಿಂದ ಮೃತಪಟ್ಟ, ಮನೆ ಕೆಲಸದ ಸಹಾಯಕಿಯ ಅಂತಿಮ ಸಂಸ್ಕಾರವನ್ನು ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ನೆರವೇರಿಸಿದ್ದಾರೆ.
ಕೊರೊನಾ ಸೋಂಕು ನಿಯಂತ್ರಿಸಲು ದೇಶದಾದ್ಯಂತ ಲಾಕ್‌ಡೌನ್ ಇರುವ ಕಾರಣ ಸರಸ್ವತಿ ಪಾತ್ರ ಅವರ ಮೃತದೇಹವನ್ನು ತವರು ರಾಜ್ಯ ಒಡಿಶಾಕ್ಕೆ ಕಳುಹಿಸಲು ಆಗಿರಲಿಲ್ಲ. 49 ವರ್ಷದ ಸರಸ್ವತಿ ಆರು ವರ್ಷಗಳಿಂದ ಗಂಭೀರ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಜಜ್‌ಪುರ ಜಿಲ್ಲೆಯವರಾದ ಅವರು ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಏ. 21ರಂದು ಮೃತಪಟ್ಟಿದರು.
‘ನನ್ನ ಪುಟ್ಟ ಮಕ್ಕಳ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದ ಅವರು ಕುಟುಂಬ ಸದಸ್ಯರಂತೆಯೇ ಇದ್ದರು. ಅವರ ಅಂತಿಮ ಸಂಸ್ಕಾರ ನೆರವೇರಿಸುವುದು ನನ್ನ ಕರ್ತವ್ಯವಾಗಿತ್ತು’ ಎಂದು ಪೂರ್ವ ದೆಹಲಿಯ ಸಂಸತ್ ಸದಸ್ಯರೂ ಆಗಿರುವ ಗಂಭೀರ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
‘ನಾನು ಯಾವಾಗಲೂ ಜಾತಿ, ಧರ್ಮ, ಸಾಮಾಜಿಕ ಅಂತಸ್ತಿಗಿಂತ ಯೋಗ್ಯತೆಗೆ ಬೆಲೆ ಕೊಡುತ್ತೇನೆ. ಅದು ಸ್ವಸ್ಥ ಸಮಾಜ ನಿರ್ಮಿಸುವ ದಾರಿ. ಓಂ ಶಾಂತಿ‘ ಎಂದು 38 ವರ್ಷದ ಆಟಗಾರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.