ಪೆಲೆಕೆಲೆ, ಶ್ರೀಲಂಕಾ: ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಮಂಗಳವಾರ ಕಾರ್ಯಾರಂಭ ಮಾಡಿದರು. ಶ್ರೀಲಂಕಾ ಎದುರಿನ ಸರಣಿಗಾಗಿ ಭಾರತ ತಂಡದವರು ಇಲ್ಲಿ ಅಭ್ಯಾಸ ನಡೆಸಿದರು. ಗಂಭೀರ್ ಮಾರ್ಗದರ್ಶನ ನೀಡಿದರು. ಫೀಲ್ಡಿಂಗ್ ಅಭ್ಯಾಸವೂ ಸೇರಿದಂತೆ ವಿವಿಧ ಕಸರತ್ತುಗಳನ್ನು ಆಟಗಾರರು ಮಾಡಿದರು.
ತರಬೇತಿ ಅವಧಿಯಲ್ಲಿ ಓಟ, ಕ್ಯಾಚಿಂಗ್ ಮತ್ತು ಪ್ರತಿಯೊಬ್ಬ ಆಟಗಾರನೊಂದಿಗೆ ಪ್ರತ್ಯೇಕ ಮಾತುಕತೆ ಇದ್ದವು. ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಈ ಸಂದರ್ಭದಲ್ಲಿ ಸಹ ಆಟಗಾರರೊಂದಿಗೆ ಚರ್ಚೆ ನಡೆಸಿದರು.
ವಿಕೆಟ್‌ಕೀಪರ್–ಬ್ಯಾಟರ್ ಸಂಜು ಸ್ಯಾಮ್ಸನ್ ಅವರಿಗೆ ಬ್ಯಾಟಿಂಗ್ ಕುರಿತ ಕೆಲವು ಸಲಹೆಗಳನ್ನು ಗಂಭೀರ್ ನೀಡಿದರು. ಆಲ್‌ರೌಂಡರ್ ಶಿವಂ ದುಬೆ ಅವರೊಂದಿಗೆ ಕೆಲಹೊತ್ತು ಚರ್ಚೆ ನಡೆಸಿದ್ದು ಕಂಡುಬಂತು.
ಶ್ರೀಲಂಕಾ ಪ್ರವಾಸದಲ್ಲಿ ಗಂಭೀರ್ ಅವರ ನೆರವು ಸಿಬ್ಬಂದಿಯಾಗಿರುವ ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್ ಮತ್ತು ನೆದರ್ಲೆಂಡ್ಸ್ ಬ್ಯಾಟರ್ ರಯನ್ ಟೆನ್ ಡಾಷೆ ಅವರೂ ಈ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದರು. ಈ ಮೂವರೂ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿದ್ದರು.
ಈ ಹಿಂದೆ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿದ್ದ ಸಂದರ್ಭದಲ್ಲಿ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲೀಪ್ ಅವರೂ ತಂಡದಲ್ಲಿ ಮುಂದುವರಿದಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಯಲ್ಲಿರುವ ಸಾಯಿರಾಜ್ ಬಹುತುಳೆ ಕೂಡ ಹಂಗಾಮಿ ಬೌಲಿಂಗ್ ಕೋಚ್ ಆಗಿ ತಂಡದಲ್ಲಿದ್ದಾರೆ.
ಭಾರತ ತಂಡವು ಈಚೆಗೆ ಟಿ20 ವಿಶ್ವಕಪ್ ಜಯಿಸಿದ ನಂತರ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿಯು ಮುಕ್ತಾಯವಾಗಿತ್ತು. ಅವರ ನಂತರ ಗಂಭೀರ್ ನೇಮಕವಾಗಿದ್ದಾರೆ.
ಇದೇ 27ರಿಂದ ಲಂಕಾ ವಿರುದ್ಧದ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.