ದುಬೈ: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಪುರುಷರ ಕ್ರಿಕೆಟ್ ಸಮಿತಿ ಮುಖ್ಯಸ್ಥರಾಗಿ ಪುನರಾಯ್ಕೆಯಾಗಿದ್ದಾರೆ.
ರಾಷ್ಟ್ರೀಯ ತಂಡದಲ್ಲಿ ಅವರ ಸಹ ಆಟಗಾರನಾಗಿದ್ದ ವಿವಿಎಸ್ ಲಕ್ಷ್ಮಣ್ ಅವರು ಸಮಿತಿಯಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ.
2000ರಿಂದ 2005ರವರೆಗೆ ಭಾರತ ತಂಡವನ್ನು ಮುನ್ನಡೆಸಿದ್ದ ಗಂಗೂಲಿ ಅವರು 2021ರಲ್ಲಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರಿಂದ ತೆರವಾದ ಐಸಿಸಿ ಕ್ರಿಕೆಟ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿ ನೇಮಕಗೊಂಡಿದ್ದರು.
ಆರು ಸದಸ್ಯರ ಸಮಿತಿಯಲ್ಲಿ ಅಫ್ಗಾನಿಸ್ತಾನದ ಮಾಜಿ ಆಟಗಾರ ಹಮೀದ್ ಹಸನ್, ವೆಸ್ಟ್‌ಇಂಡೀಸ್‌ನ ಬ್ಯಾಟಿಂಗ್ ದಿಗ್ಗಜ ಡೆಸ್ಮಂಡ್ ಹೇನ್ಸ್, ದಕ್ಷಿಣ ಆಫ್ರಿಕಾದ ತಂಡದ ನಾಯಕ ತೆಂಬಾ ಬವುಮಾ ಮತ್ತು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಜೊನಾಥನ್ ಟ್ರಾಟ್ ಇದ್ದಾರೆ.
ಐಸಿಸಿ ಮಹಿಳಾ ಕ್ರಿಕೆಟ್ ಸಮಿತಿಯ ಅಧ್ಯಕ್ಷೆಯಾಗಿ ನ್ಯೂಜಿಲೆಂಡ್‌ನ ಮಾಜಿ ಆಫ್ ಸ್ಪಿನ್ನರ್ ಕ್ಯಾಥರೀನ್ ಕ್ಯಾಂಪ್‌ಬೆಲ್ ನೇಮಕಗೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಅವ್ರಿಲ್ ಫಾಹೆ ಮತ್ತು ದಕ್ಷಿಣ ಆಫ್ರಿಕಾದ ಪೊಲೆಟ್ಸಿ ಮೊಸೆಕಿ ಸಮಿತಿಯಲ್ಲಿ ಅವಕಾಶ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.