ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಈಚೆಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿಯವರಿಗೆ ಭಾರತದ ಸಂಸದ ಮತ್ತು ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
’ಪಾಕಿಸ್ತಾನ ಸೇನೆಯಲ್ಲಿ ಏಳು ಲಕ್ಷ ಸೈನಿಕರು ಇದ್ದಾರೆ. ಅವರಿಗೆ 20 ಕೋಟಿ ಜನರ ಬೆಂಬಲವಿದೆ ಎಂದು 16ರ ಬಾಲಕ ಆಫ್ರಿದಿ ಹೇಳಿದ್ದಾನೆ. ಆದರೂ ಪಾಕ್ 70 ವರ್ಷದಿಂದ ಕಾಶ್ಮೀರಕ್ಕಾಗಿ ಭಿಕ್ಷೆ ಬೇಡುತ್ತಿದೆ. ಆಫ್ರಿದಿ, ಇಮ್ರಾನ್ ಮತ್ತು ಬಜ್ವಾ ಜೋಕರ್‌ಗಳಾಗಿದ್ದಾರೆ. ಪಾಕಿಸ್ತಾನದ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಭಾರತ ಮತ್ತು ನಮ್ಮ ಪ್ರಧಾನಿಯ ವಿರುದ್ಧ ಸದಾ ವಿಷ ಕಕ್ಕುತ್ತಲೇ ಇರುತ್ತಾರೆ. ಆದರೆ ’ಜಡ್ಜ್‌ಮೆಂಟ್ ಡೇ‘ ವರೆಗೂ ಕಾಶ್ಮೀರ ನಿಮಗೆ ಸಿಗುವುದಿಲ್ಲ. ಬಾಂಗ್ಲಾದೇಶ ನೆನಪಿದೆಯಲ್ಲವೇ?‘ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಗಂಭೀರ್ ಮತ್ತು ಆಫ್ರಿದಿ ಅವರು ಕ್ರಿಕೆಟ್ ಆಡುವ ದಿನಗಳಿಂದಲೂ ಬದ್ಧ ವೈರಿಗಳಾಗಿದ್ದಾರೆ. ಈಚೆಗೆ ತಮ್ಮ ಪುಸ್ತಕದಲ್ಲಿಯೂ ಆಫ್ರಿದಿಯು ಗಂಭೀರ್ ವಿರುದ್ಧ ಟೀಕೆ ಮಾಡಿದ್ದರು. ಆಗ ಗೌತಮ್, ’ದಗಾಕೋರರು, ಸುಳ್ಳುಗಾರರು ಮತ್ತು ವಂಚಕರನ್ನು ನಾನು ಸದಾ ದ್ವೇಷಿಸುತ್ತೇನೆ‘ ಎಂದು ಗೌತಮ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ಈಚೆಗೆ ಪಾಕ್ ಆಕ್ರಮಿತ ಕಾಶ್ಮೀರದ ಗ್ರಾಮವೊಂದಕ್ಕೆ ತೆರಳಿದ್ದ ಆಫ್ರಿದಿಯು, ’ಇದೊಂದು ಸುಂದರ ಗ್ರಾಮ. ಇಲ್ಲಿಗೆ ಬಹಳ ದಿನಗಳಿಂದ ಬರಬೇಕೆಂಬ ಆಸೆಯಿತ್ತು. ಈಗ ಈಡೇರಿದೆ. ಈಗ ಜಗತ್ತನ್ನು ಮಹಾಮಾರಿ ಕೊರೊನಾ ಆವರಿಸಿಕೊಂಡಿದೆ. ಆದರೆ ಅದಕ್ಕಿಂತ ಭಯಂಕರ ರೋಗವು ಇನ್ನೊಂದಿದೆ. ಅದು ಭಾರತದ ಪ್ರಧಾನಿ ಮೋದಿಯವರ ಮನೋಭಾವ. ಈ ಸ್ಥಳದಿಂದ ಎರಡು ಕಿಲೊಮೀಟರ್ ದೂರದ ಕಾಶ್ಮೀರದಲ್ಲಿ ನಮ್ಮ ಬಂಧು, ಬಾಂಧವರಿಗೆ ಮೋದಿ ಬಹಳ ತೊಂದರೆ ಕೊಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರು ಈ ಬಗ್ಗೆ ಇಲ್ಲಿಯೂ ಮತ್ತು ನಾಳೆ ದೇವರ ಮುಂದೆ ಉತ್ತರ ಕೊಡಲೇಬೇಕು‘ ಎಂದು ಹೇಳಿದ್ದರು. ಅವರ ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.