ADVERTISEMENT

ಭಾರತದ ಬ್ಯಾಟ್ಸ್‌ಮನ್‌ಗಳು ಇಷ್ಟವಿಲ್ಲದಿದ್ದರೆ ದೇಶ ಬಿಟ್ಟು ತೊಲಗು!

ಕ್ರಿಕೆಟ್‌ ಅಭಿಮಾನಿಯ ವಿರುದ್ಧ ಹರಿಹಾಯ್ದ ವಿರಾಟ್ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 14:16 IST
Last Updated 7 ನವೆಂಬರ್ 2018, 14:16 IST
   

ನವದೆಹಲಿ: ‘ಬೇರೆ ದೇಶದ ಬ್ಯಾಟ್ಸ್‌ಮನ್‌ಗಳನ್ನು ಇಷ್ಟಪಡುವುದಾದರೆ ಭಾರತವನ್ನು ಬಿಟ್ಟು ತೊಲಗು’–

ಭಾರತ ಕ್ರಿಕೆಟ್ ತಂಡದ ನಾಯಕ, ಸ್ಫೊಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಅಭಿಮಾನಿಯೊಬ್ಬರ ಹೇಳಿಕೆಗೆ ನೀಡಿರುವ ಉತ್ತರ ಇದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಪರ ಮತ್ತು ವಿರೋಧಗಳ ಚರ್ಚೆಗೆ ಗ್ರಾಸವಾಗಿದೆ. ಕೆಲವರು ವಿರಾಟ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವೆಂಬರ್ ಐದರಂದು ವಿರಾಟ್ 30ನೇ ಜನ್ಮದಿನ ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರ ಹೆಸರಿನ ನೂತನ ಆ್ಯಪ್ ಬಿಡುಗಡೆಯಾಗಿತ್ತು. ಈ ಆ್ಯಪ್ ಮೂಲಕ ವಿರಾಟ್ ಅವರು ತಮ್ಮ ಅಭಿಮಾನಿಗಳಿಗೆ ವಿಡಿಯೋ ಮೂಲಕ ಉತ್ತರಗಳನ್ನು ನೀಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ನೀಡಿರುವ ಹೇಳಿಕೆಗಳನ್ನು ಓದುವ ವಿರಾಟ್ ಅದಕ್ಕೆ ಉತ್ತರ ನೀಡುವುದು ಈ ಆ್ಯಪ್‌ನ ವಿಶೇಷ.

ADVERTISEMENT

ಅದರಲ್ಲಿ ಒಬ್ಬ ಅಭಿಮಾನಿಯು, ‘ವಿರಾಟ್‌ ಕೊಹ್ಲಿ ಅತಿಯಾಗಿ ಗೌರವಿಸಲಾಗುತ್ತಿರುವ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಆದರೆ ಅವರ ಬ್ಯಾಟಿಂಗ್‌ನಲ್ಲಿ ಅಂತಹ ವಿಶೇಷತೆಯೇನೂ ಇಲ್ಲ.ಭಾರತೀಯ ಬ್ಯಾಟ್ಸ್‌ಮನ್‌ಗಳಿಗಿಂತಲೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟಿಗರ ಬ್ಯಾಟಿಂಗ್ ಇಷ್ಟಪಡುತ್ತೇನೆ’ ಎಂದು ಬರೆದಿದ್ದರು.

ಆದನ್ನು ಓದಿದ ನಂತರ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು ಹೀಗೆ,‘ಓಕೆ, ನನ್ನ ಪ್ರಕಾರ ನೀನು ಭಾರತದಲ್ಲಿ ವಾಸ ಮಾಡಬಾರದು, ಬೇರೆ ದೇಶಗಳಲ್ಲಿ ವಾಸಿಸಬಹುದು, ಬೇರೆ ದೇಶಗಳನ್ನು ಇಷ್ಟಪಡುವ ನೀನು ಭಾರತದಲ್ಲಿ ಯಾಕೆ ವಾಸ ಮಾಡುತ್ತೀಯಾ? ನನ್ನ ಇಷ್ಟಪಡದಿದ್ದರೆ ಪರವಾಗಿಲ್ಲ, ನೀನು ಭಾರತದಲ್ಲೇ ಇರಬೇಕು ಎಂದು ನಾನು ಸಹ ಯೋಚಿಸುವುದಿಲ್ಲ, ನಿಮ್ಮ ಆದ್ಯತೆ ಏನು?’ ಎಂದಿದ್ದಾರೆ.

ಕೊಹ್ಲಿಯಈ ಉತ್ತರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. 2008ರಲ್ಲಿ ಕೊಹ್ಲಿ 19ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್‌ ಗಿಬ್ಸ್‌ ತಮ್ಮ ಮೆಚ್ಚಿನ ಕ್ರಿಕೆಟಿಗ ಎಂದು ಹೇಳಿರುವ ವಿಡಿಯೊ ತುಣುಕುಗಳನ್ನು ಟ್ವಿಟರ್‌ನಲ್ಲಿ ಹಾಕಿ ತಿರುಗೇಟು ನೀಡಿದ್ದಾರೆ.

‘ಕ್ರಿಕೆಟ್‌ಪ್ರಿಯರಿಗೆ ತಮ್ಮ ನೆಚ್ಚಿನ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕುಇಲ್ಲವೇ? ಬೇರೆ ದೇಶದ ಆಟಗಾರರ ಉತ್ತಮ ಆಟವನ್ನು ಮೆಚ್ಚಿಕೊಳ್ಳುವುದರಲ್ಲಿ ತಪ್ಪೇನಿದೆ?’ ಎಂದು ಕೆಲವರು ಚಾಟಿ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.