ADVERTISEMENT

ನಾರ್ವೆ ಚೆಸ್‌ ಟೂರ್ನಿ: ನಕಮುರಾಗೆ ಇರಿಗೇಶಿ ಆಘಾತ

ಪಿಟಿಐ
Published 1 ಜೂನ್ 2025, 23:30 IST
Last Updated 1 ಜೂನ್ 2025, 23:30 IST
ಅರ್ಜುನ್‌ ಇರಿಗೇಶಿ 
ಅರ್ಜುನ್‌ ಇರಿಗೇಶಿ    

ಸ್ಟಾವೆಂಜರ್‌ (ನಾರ್ವೆ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್‌ ಇರಿಗೇಶಿ ಅವರು ನಾರ್ವೆ ಚೆಸ್‌ ಟೂರ್ನಿಯಲ್ಲಿ ವಿಶ್ವದ ಎರಡನೇ ಕ್ರಮಾಂಕದ ಹಿಕಾರು ನಕಮುರಾ ಅವರಿಗೆ ಆಘಾತ ನೀಡಿದರು. ಮತ್ತೊಂದೆಡೆ ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಮತ್ತೊಂದು ಸೋಲಿನೊಂದಿಗೆ ಜಂಟಿ ಐದನೇ ಸ್ಥಾನಕ್ಕೆ ಕುಸಿದರು. 

ಇರಿಗೇಶಿ (6) ವಿರುದ್ಧ ನಕಮುರಾ (6.5) ಅವರಿಗೆ ಗೆಲ್ಲುವ ಉತ್ತಮ ಅವಕಾಶವಿತ್ತಾದರೂ ದೀರ್ಘ ಆಟದ ನಂತರ ಪಂದ್ಯ ಡ್ರಾ ಆಯಿತು. ಫಲಿತಾಂಶ ನಿರ್ಧರಿಸಲು ನಡೆಯುವ ಕಾಲಮಿತಿಯ ‘ಆರ್ಮ್‌ಗೆಡನ್‌’ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಗೆಲುವಿನ ನಗೆ ಬೀರಿದರು. 

ಹಾಲಿ ಚಾಂಪಿಯನ್ ಮ್ಯಾಗ್ನಸ್‌ ಕಾರ್ಲ್‌ಸನ್‌ ಶನಿವಾರವೂ ಮಿಂಚಿದರು. ಅಮೆರಿಕದ ಮತ್ತೊಬ್ಬ ಗ್ರ್ಯಾಂಡ್‌ಮಾಸ್ಟರ್‌ ಫ್ಯಾಬಿಯಾನೊ ಕರುವಾನ (8) ಅವರನ್ನು ‘ಆರ್ಮ್‌ಗೆಡನ್‌’ನಲ್ಲಿ ಮಣಿಸಿ ಕಾರ್ಲ್‌ಸನ್‌  9.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದರು. 

ADVERTISEMENT

ಚೀನಾದ ಗ್ರ್ಯಾಂಡ್‌ಮಾಸ್ಟರ್‌ ವೀ ಯಿ ವಿರುದ್ಧ ಗುಕೇಶ್‌ ದೀರ್ಘ ಆಟದ ಪಂದ್ಯದಲ್ಲಿ ಡ್ರಾ ಸಾಧಿಸಿ, ‘ಆರ್ಮ್‌ಗೆಡನ್‌’ನಲ್ಲಿ  ಸೋಲೊಪ್ಪಿಕೊಂಡರು. ಉಭಯ ಆಟಗಾರರು ತಲಾ 5.5 ಅಂಕ ಗಳಿಸಿದ್ದಾರೆ. 

ಮುನ್ನಡೆಯಲ್ಲಿ ಹಂಪಿ: ಮಹಿಳೆಯರ ವಿಭಾಗದಲ್ಲಿ ಗೆಲುವಿನ ಓಟ ಮುಂದುವರಿಸಿದರುವ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೋನೇರು ಹಂಪಿ (8.5) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು ಚೀನಾದ ಲಿ ಟಿಂಗ್ಜಿ (5) ಅವರನ್ನು ಮಣಿಸಿದರು. ಉಕ್ರೇನ್‌ನ ಅನ್ನಾ ಮುಝಿಚುಕ್  (8) ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.