ADVERTISEMENT

ಲೈಂಗಿಕ ದೌರ್ಜನ್ಯದ ಸಂದರ್ಭ ಮಹಿಳೆಯ ಉಸಿರುಗಟ್ಟಿಸಿದ್ದ ಗುಣತಿಲಕ: ವರದಿ

ಪಿಟಿಐ
Published 9 ನವೆಂಬರ್ 2022, 16:12 IST
Last Updated 9 ನವೆಂಬರ್ 2022, 16:12 IST
   

ಸಿಡ್ನಿ: ಲೈಂಗಿಕ ದೌರ್ಜನ್ಯದ ಸಂದರ್ಭ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಬಹುತೇಕ ಮಹಿಳೆಯ ಉಸಿರುಗಟ್ಟಿಸಿದ್ದರು ಎಂದು ಪೊಲೀಸ್ ದಾಖಲೆಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಟಿ–20 ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಶ್ರೀಲಂಕಾ ತಂಡದ ಆಟಗಾರನ ಜೊತೆ ನವೆಂಬರ್ 2ರಂದು ಡೇಟಿಂಗ್‌ಗೆ ತೆರಳಿದ್ದ ಮಹಿಳೆ, ಡೇಟಿಂಗ್ ಬಳಿಕ ಸಿಡ್ನಿಯ ರೋಸ್ ಬೇನಲ್ಲಿರುವ ತನ್ನ ನಿವಾಸದಲ್ಲಿ ಶ್ರೀಲಂಕಾ ಕ್ರಿಕೆಟಿಗ 4 ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದರು.

ಬಳಿಕ, 31 ವರ್ಷದ ಗುಣತಿಲಕ ಅವರನ್ನು ಲಂಕಾ ತಂಡ ತಂಗಿದ್ದ ಹೋಟೆಲ್‌ನಲ್ಲಿಯೇ ಸಿಡ್ನಿ ಪೊಲೀಸರು ಬಂಧಿಸಿದ್ದರು. ಲಂಕಾದ ಎಡಗೈ ಬ್ಯಾಟರ್‌ಗೆ ಸೋಮವಾರ ಜಾಮೀನು ಸಹ ನಿರಾಕರಿಸಲಾಗಿದ್ದು, ಆರೋಪ ಸಾಬೀತಾದರೆ 14 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

ADVERTISEMENT

ಲೈಂಗಿಕ ದೌರ್ಜನ್ಯದ ಸಂದರ್ಭ ಗುಣತಿಲಕ ಮೂರು ಬಾರಿ ಉಸಿರುಗಟ್ಟಿಸುವ ಯತ್ನ ನಡೆಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಯ ಮಣಿಕಟ್ಟನ್ನು ಹಿಡಿದು ಆತನ ಕೈ ಸರಿಸಲು ಮಹಿಳೆ ಯತ್ನಿಸಿದ್ದಾಳೆ. ಆದರೆ, ಆತ ಕೈಯನ್ನು ಕುತ್ತಿಗೆಗೆ ಬಿಗಿಯಾಗಿ ಹಿಡಿದಿದ್ದ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿವೆ.

ತನ್ನ ಪ್ರಾಣಕ್ಕೆ ಕುತ್ತು ಬರಬಹುದೆಂದು ಮಹಿಳೆ ತೀವ್ರ ಆತಂಕಗೊಡಿದ್ದರು. ಪದೇ ಪದೇ ತಪ್ಪಿಸಿಕೊಳ್ಳಲು ಯತ್ನ ನಡೆಸಿರುವುದನ್ನು ಗಮನಸಿದರೆ ಆಕೆಗೆ ಸಮ್ಮತಿ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ವರದಿ ತಿಳಿಸಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 12ಕ್ಕೆ ನಿಗದಿಪಡಿಸಲಾಗಿದೆ.

ಈ ಮಧ್ಯೆ, ಗುಣತಿಲಕ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಆತನನ್ನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಅಮಾನತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.