ADVERTISEMENT

ಹಣೆಗೆ ಪೆಟ್ಟು: ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯದ ಹಾಶೀಂ ಅಮ್ಲಾ

ವಿಶ್ವಕಪ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 11:17 IST
Last Updated 2 ಜೂನ್ 2019, 11:17 IST
   

ಜೊಹಾನ್ಸ್‌ಬರ್ಗ್‌(ದಕ್ಷಿಣ ಆಫ್ರಿಕಾ): ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ–ಬಾಂಗ್ಲಾದೇಶ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್‌ ಹಾಶೀಂ ಆಮ್ಲಾ ಅಲಭ್ಯರಾಗಿದ್ದಾರೆ.

ಹಣೆಗೆ ಉಂಟಾಗಿರುವ ನೋವಿನಿಂದ ಪೂರ್ಣ ಚೇತರಿಸಿಕೊಳ್ಳದ ಕಾರಣ ಅವರಿಗೆ ದಕ್ಷಿಣ ಆಫ್ರಿಕಾದ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲು ಅವಕಾಶ ನೀಡಲಾಗಿಲ್ಲ ಎಂದು ಟೀಮ್‌ ಮ್ಯಾನೇಜರ್‌ ಡಾ.ಮೊಹಮ್ಮದ್‌ ಮೊಸಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 30ರಂದು ಇಂಗ್ಲೆಂಡ್‌ ವಿರುದ್ಧ ನಡೆದಿದ್ದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿಹಾಶೀಂ ಆಮ್ಲಾ ಹೆಲ್ಮೆಟ್‌ಗೆ ಚೆಂಡು ಬಡಿದು ಗಾಯಗೊಂಡಿದ್ದರು. ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್ ಗಂಟೆಗೆ 145 ಕಿ.ಮೀ ವೇಗದಲ್ಲಿ ಹಾಕಿದ ಬೌನ್ಸರ್ ಎಸೆತವು ಹೆಲ್ಮೆಟ್‌ನ ಜಾಲರಿಗೆ ಬಡಿದದ್ದರಿಂದ ಆಮ್ಲಾ ಹಣೆಯ ನೋವು ಅನುಭವಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಜೂನ್‌ 5ರಂದು ಭಾರತದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಪೂರ್ಣ ಗುಣಮುಖರಾಗಿ ಆಮ್ಲಾ ಕಣಕ್ಕಿಳಿಯುವ ಸಾಧ್ಯತೆಯಿದೆ.

ಏಳು ರನ್‌ ಗಳಿಸಿದ್ದಾಗ ಗಾಯಗೊಂಡಿದ್ದ ಆಮ್ಲಾ ಮೈದಾನದಿಂದ ಹೊರನಡೆದಿದ್ದರು. ತಂಡ ಏಳು ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿದ್ದಾಗ ಮತ್ತೆ ಬ್ಯಾಟಿಂಗ್‌ಗೆ ಮರಳಿ, ಆರು ರನ್‌ ಪೇರಿಸಿದ್ದರು. ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 104ರನ್‌ಗಳಿಂದ ಸೋಲು ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.