
ನವದೆಹಲಿ: ಭಾರತದ ಆಲ್‌ರೌಂಡರ್ ಆಟಗಾರ ದೀಪಕ್ ಹೂಡಾ ಅವರು ಅನುಮಾನಾಸ್ಪದ ಬೌಲರ್‌ಗಳ ಪಟ್ಟಿಯಲ್ಲಿದ್ದು, ಐಪಿಎಲ್ ಹರಾಜಿಗೂ ಮುನ್ನ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 19ನೇ ಆವೃತ್ತಿಯ ಹರಾಜು ಪ್ರಕ್ರಿಯೆಯು ಡಿ.16ರಂದು ಅಬುಧಾಬಿಯಲ್ಲಿ ಜರುಗಲಿದೆ.
ಐಪಿಎಲ್ ಮಿನಿ ಹರಾಜಿಗೂ ಮುನ್ನವೇ ಹೂಡಾ ಅವರ ಬೌಲಿಂಗ್ ಶೈಲಿಯ ಕುರಿತು ಬಿಸಿಸಿಐ, ಎಲ್ಲಾ ಫ್ರಾಂಚೈಸಿಗಳಿಗೂ ಶನಿವಾರ(ಡಿ.13) ಮಾಹಿತಿ ನೀಡಿದೆ.
ಸಾಂದರ್ಭಿಕ ಸ್ವಿನ್ನರ್ ಆಗಿರುವ 30 ವರ್ಷದ ಹೂಡಾ, ಕಳೆದ ಐಪಿಎಲ್ ವೇಳೆಯೂ ಅನುಮಾನಾಸ್ಪದ ಬೌಲರ್‌ಗಳ ಪಟ್ಟಿಯಲ್ಲಿದ್ದರು. ಆದರೂ, ಚೆನ್ನೈ ಸೂಪರ್ ಕಿಂಗ್ಸ್ ಪರ 7 ಪಂದ್ಯಗಳನ್ನು ಬ್ಯಾಟರ್ ಆಗಿಯೇ ಆಡಿದ್ದರು.
ದೇಶೀಯ ಕ್ರಿಕೆಟ್‌ನಲ್ಲಿ ರಾಜಸ್ಥಾನ ತಂಡವನ್ನು ಪ್ರತಿನಿಧಿಸುತ್ತಿರುವ ಹೂಡಾ, ರಣಜಿ ಟೂರ್ನಿಯಲ್ಲಿ ಒಂದು ಓವರ್ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 5 ಓವರ್ ಬೌಲಿಂಗ್ ಮಾಡಿದ್ದಾರೆ. ಈ ವೇಳೆಯೂ ಬೌಲಿಂಗ್ ಶೈಲಿಯು ಬದಲಾವಣೆಯಾಗದ ಕಾರಣ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಭಾರತದ ಪರ 10 ಏಕದಿನ ಹಾಗೂ 21 ಟಿ–20 ಪಂದ್ಯಗಳನ್ನು ಆಡಿರುವ ಹೂಡಾ, ಐಪಿಎಲ್ ಮಿನಿ ಹರಾಜಿನಲ್ಲಿ ₹75 ಲಕ್ಷ ಮೂಲಬೆಲೆ ಹೊಂದಿದ್ದಾರೆ.
ಕರ್ನಾಟಕದ ಕೆ.ಎಲ್. ಶ್ರೀಜಿತ್ ಕೂಡ ಅನುಮಾನಾಸ್ಪದ ಬೌಲರ್‌ಗಳ ಪಟ್ಟಿಯಲ್ಲಿದ್ದು, ಐಪಿಎಲ್‌ಗೆ ಆಯ್ಕೆಯಾದರೆ ಟೂರ್ನಿಯಲ್ಲಿ ಬೌಲಿಂಗ್ ಮಾಡುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.