ADVERTISEMENT

ಅಂದು ಲಂಚ ಕೊಡಲು ನಿರಾಕರಿಸಿದ್ದ ಅಪ್ಪ: ವಿರಾಟ್ ಕೊಹ್ಲಿ

ದೆಹಲಿ ಜೂನಿಯರ್ ಕ್ರಿಕೆಟ್‌ ತಂಡದ ಆಯ್ಕೆ ಬಗ್ಗೆ ವಿರಾಟ್ ನೆನಪು

ಏಜೆನ್ಸೀಸ್
Published 20 ಮೇ 2020, 3:18 IST
Last Updated 20 ಮೇ 2020, 3:18 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ನವದೆಹಲಿ : ತಮ್ಮನ್ನು ದೆಹಲಿ ಜೂನಿಯರ್ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲು ಒಬ್ಬರು ಲಂಚ ಕೇಳಿದ್ದಾಗ ತಮ್ಮ ತಂದೆ ನಿರಾಕರಿಸಿದ್ದರು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನೆನಪಿಸಿಕೊಂಡಿದ್ದಾರೆ.

’ನನ್ನ ತವರು ರಾಜ್ಯದಲ್ಲಿ ಕೆಲವು ನಿಯಮಬಾಹಿರ ಸಂಗತಿಗಳು ನಡೆಯುತ್ತವೆ. ಅದು ಬೇಸರದ ವಿಷಯ. ಜೂನಿಯರ್ ಕ್ರಿಕೆಟಿಗನಾಗಿದ್ದಾಗ ನನ್ನೊಂದಿಗೂ ಇಂತಹದೊಂದು ಘಟನೆ ನಡೆದಿತ್ತು. ಅಯ್ಕೆ ಸಮಿತಿಯಲ್ಲಿದ್ದ ಒಬ್ಬರು ನನ್ನ ಅಪ್ಪನ ಬಳಿ ಬಂದು ವಿರಾಟ್‌ಗೆ ಆಯ್ಕೆಯಾಗುವ ಅರ್ಹತೆ ಇದೆ. ಆದರೆ ಸ್ವಲ್ಪ ಹೆಚ್ಚುವರಿಯಾಗಿ ಕೊಡಬೇಕಾಗುತ್ತದೆಯೆಂದು ಲಂಚ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ನನ್ನ ತಂದೆ, ಆಯ್ಕೆ ಮಾಡುವುದಾದರೆ ಮೆರಿಟ್ ಮೇಲೆ ಮಾಡಿ ಹೆಚ್ಚಿನದನ್ನೇನೂ ಕೊಡುವುದಿಲ್ಲವೆಂದು ಕಡ್ಡಿ ಮುರಿದಂತೆ ಹೇಳಿದ್ದರು‘ ಎಂದು ಸ್ಮರಿಸಿಕೊಂಡಿದ್ದಾರೆ.

’ಆ ಘಟನೆಯಿಂದ ನನ್ನ ಮನಸ್ಸಿಗೆ ಬಹಳ ನೋವಾಗಿತ್ತು. ಸಿಕ್ಕಾಪಟ್ಟೆ ಅತ್ತಿದ್ದೆ. ಆದರೆ ಅದರಿಂದ ಒಂದು ಪಾಠ ಕಲಿತೆ. ಜಗತ್ತಿನ ನಿಜ ಸ್ವರೂಪ ತಿಳಿದಿತ್ತು. ಜೀವನದಲ್ಲಿ ಏನೇ ಮಾಡಿದರೂ ನಮ್ಮ ಸಾಮರ್ಥ್ಯದಿಂದ ಮಾಡಬೇಕು. ಯಾವುದೇ ಲೋಪವಾಗದಂತೆ ಪರಿಶ್ರಮಪಡಬೇಕು. ನಮ್ಮನ್ನು ಕಡೆಗಣಿಸಲು ಕಾರಣಗಳನ್ನು ಉಳಿಸಬಾರದು. ಆಗ ಮಾತ್ರ ಪ್ರಾಮಾಣಿಕವಾಗಿ ಬದುಕಲು ಸಾಧ್ಯವೆಂದು ಅರಿತೆ. ಇದು ನನ್ನ ತಂದೆ ಕಲಿಸಿದ ಅಮೂಲ್ಯವಾದ ಪಾಠ. ಅವರು ಯಾವತ್ತೂ ಉಪದೇಶ ಮಾಡಲಿಲ್ಲ. ಆದರೆ ತಮ್ಮ ಕಾರ್ಯಗಳ ಮೂಲಕವೇ ನನಗೆ ಆದರ್ಶರಾದರು‘ ಎಂದು ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಯೊಂದಿಗೆ ಆಂಗ್ಲ ಪತ್ರಿಕೆಯೊಂದರ ಸಂವಾದದಲ್ಲಿ ಭಾಗವಹಿಸಿದ್ದ ಕೊಹ್ಲಿ ಹೇಳಿದ್ದಾರೆ.

ADVERTISEMENT

ವಿರಾಟ್ ತಂದೆ ಪ್ರೇಮ್ ಕೊಹ್ಲಿಯವರು ವಕೀಲರಾಗಿದ್ದರು. ವಿರಾಟ್ 18 ವರ್ಷದವರಿದ್ದಾಗ ಪ್ರೇಮ್ ನಿಧನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.