ADVERTISEMENT

ಬೆಂಗಳೂರಿಗೆ ಹೈದರಾಬಾದ್ ಕಠಿಣ ಚಾಲೆಂಜ್

ಏಬಿ ಡಿವಿಲಿಯರ್ಸ್‌–ಡೇವಿಡ್ ವಾರ್ನರ್‌ ಜಿದ್ದಾಜಿದ್ದಿ ಇಂದು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 19:19 IST
Last Updated 30 ಮಾರ್ಚ್ 2019, 19:19 IST
   

ಹೈದರಾಬಾದ್: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋತಾಗ ಚೆನ್ನೈನ ಚೆಪಾಕ್ ಕ್ರೀಡಾಂಗಣದ ಪಿಚ್‌ ಬಗ್ಗೆ ಅಸಮಾಧಾನದ ನುಡಿಗಳು ಕೇಳಿಬಂದವು. ತನ್ನ ತವರಿನಲ್ಲಿಯೇ ಎರಡನೇ ಪಂದ್ಯದಲ್ಲಿ ಅನುಭವಿಸಿದ್ದ ಸೋಲು ನೋಬಾಲ್‌ ವಿವಾದದಲ್ಲಿ ಮರೆಯಾಯಿತು.

ಇದೀಗ ಮೂರನೇ ಪಂದ್ಯವನ್ನು ಆಡಲು ಇಲ್ಲಿಗೆ ಬಂದಿರುವ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿಗೆ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ ಅವರ ಕಠಿಣ ಸವಾಲು ಎದುರಿಸುವ ಒತ್ತಡದಲ್ಲಿದೆ. ಭಾನುವಾರ ರಾಜೀವಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇದೇ ಅಂಗಳದಲ್ಲಿ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಡೇವಿಡ್ ವಾರ್ನರ್ (69;37ಎಸೆತ, 9ಬೌಂಡರಿ, 2ಸಿಕ್ಸರ್)ಅಬ್ಬರದ ಬ್ಯಾಟಿಂಗ್‌ನಿಂದಾಗಿ ರಾಜಸ್ಥಾನ್ ತಂಡವು ಕೊಟ್ಟಿದ್ದ 198 ರನ್‌ಗಳ ಕಠಿಣ ಗುರಿಯನ್ನು 19 ಓವರ್‌ಗಳಲ್ಲಿ ಸಾಧಿಸಿತ್ತು. ಅವರೊಂದಿಗೆ ಜಾನಿ ಬೆಸ್ಟೊ, ವಿಜಯಶಂಕರ್, ರಶೀದ್ ಖಾನ್ ಮತ್ತು ಯೂಸುಫ್ ಪಠಾಣ್ ಕೂಡ ಮಿಂಚಿದ್ದರು. ಇದು ಆರ್‌ಸಿಬಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಸನ್‌ರೈಸರ್ಸ್‌ ವಿರುದ್ಧ ಜಯ ಸಾಧಿಸಬೇಕಾದರೆ ಆರ್‌ಸಿಬಿಯು ಬ್ಯಾಟಿಂಗ್ ವಿಭಾಗದಲ್ಲಿ ಸಂಪೂರ್ಣ ಸಫಲತೆ ಗಳಿಸುವ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ತಂಡವು ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಮುಂಬೈ ಎದುರಿನ ಪಂದ್ಯದಲ್ಲಿ 187 ರನ್‌ಗಳ ಗುರಿ ಬೆನ್ನಟ್ಟಿ 181 ರನ್‌ ಬಾರಿಸಿತ್ತು. ಎಬಿ ಡಿವಿಲಿಯರ್ಸ್‌ ಔಟಾಗದೇ 70 ರನ್‌ ಹೊಡೆದಿದ್ದರು. ಕೊಹ್ಲಿ 46 ರನ್‌ ಗಳಿಸಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ 31 ರನ್ ಗಳಿಸಿದ್ದರು. ಆದರೆ ಉಳಿದವರು ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಕೊನೆಯ ಓವರ್‌ನಲ್ಲಿ ಸಿಕ್ಸರ್‌ ಬಾರಿಸಿದ್ದ ಶಿವಂ ದುಬೆ ವಿಶ್ವಾಸ ಮೂಡಿಸಿದ್ದಾರೆ. ಆದರೆ ವಿಂಡೀಸ್ ಪ್ರತಿಭೆ ಶಿಮ್ರೊನ್ ಹೆಟ್ಮೆಯರ್, ಮೊಯಿನ್ ಅಲಿ ತಮ್ಮ ಮೇಲಿನ ವಿಶ್ವಾಸ ಉಳಿಸಿಕೊಳ್ಳಬೇಕಿದೆ.

ADVERTISEMENT

ಸನ್‌ರೈಸರ್ಸ್‌ ತಂಡದ ಬೌಲಿಂಗ್ ಪಡೆಯೂ ಬಲಶಾಲಿಯಾಗಿರುವುದೂ ಕೂಡ ಆರ್‌ಸಿಬಿಯ ಒತ್ತಡ ಹೆಚ್ಚಿಸಿದೆ. ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಸಂದೀಪ್ ಶರ್ಮಾ ಮತ್ತು ರಶೀದ್ ಖಾನ್ ಅವರು ‘ಮ್ಯಾಚ್‌ ವಿನ್ನಿಂಗ್‌’ ಬೌಲರ್‌ಗಳೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಅವರು ವಿರಾಟ್ ಮತ್ತು ಎಬಿಡಿಯನ್ನು ಕಟ್ಟಿಹಾಕಲು ವಿಶೇಷ ಯೋಜನೆ ರೂಪಿಸುವುದು ಖಚಿತ. ಬೌಲರ್‌ಗಳು ಅದರಲ್ಲಿ ಯಶಸ್ವಿಯಾದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಮಿಂಚಲೇಬೇಕು.

ಆರ್‌ಸಿಬಿಯ ಬೌಲರ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮುಂಬೈ ಎದುರಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿದ್ದ ಸ್ಪಿನ್ನರ್ ಯಜುವೇಂದ್ರ ಚಾಹಲ್, ತಲಾ ಎರಡು ವಿಕೆಟ್ ಗಳಿಸಿದ್ದ ಮಧ್ಯಮವೇಗಿ ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು ಕಠಿಣ ಸವಾಲು ಒಡ್ಡುವುದು ಖಚಿತ. ಮಧ್ಯಮವೇಗಿ ನವದೀಪ್ ಸೈನಿ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅವರು ವಿಕೆಟ್‌ ಗಳಿಸುವಲ್ಲಿ ಸಫಲರಾಗಿಲ್ಲ. ಆದ್ದರಿಂದ ಅವರಿಬ್ಬರ ಬದಲಿಗೆ ಟಿಮ್ ಸೌಥಿ ಮತ್ತು ಕುಲವಂತ ಖೆಜ್ರೊಲಿಯಾಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ.

ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವು ನೀಡುವಂತಿರುವ ಪಿಚ್‌ನಲ್ಲಿ ರನ್‌ಗಳ ಹೊಳೆ ಹರಿಯುವ ನಿರೀಕ್ಷೆ ಇದೆ. ಎರಡೂ ತಂಡಗಳಲ್ಲಿರುವ ಬ್ಯಾಟಿಂಗ್ ದಿಗ್ಗಜರಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆಂಬುದೇ ಈಗ ಕುತೂಹಲದ ಕೇಂದ್ರವಾಗಿದೆ.

ತಂಡಗಳು ಇಂತಿವೆ:

ಆರ್‌ಸಿಬಿ: ವಿರಾಟ್ ಕೊಹ್ಲಿ (ನಾಯಕ), ಪಾರ್ಥಿವ್ ಪಟೇಲ್ (ವಿಕೆಟ್‌ಕೀಪರ್), ಎಬಿ ಡಿವಿಲಿಯರ್ಸ್, ಮೊಯಿನ್ ಅಲಿ, ಶಿಮ್ರೊನ್ ಹೆಟ್ಮೆಯರ್, ಶಿವಂ ದುಬೆ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಪವನ್ ನೇಗಿ, ವಾಷಿಂಗ್ಟನ್ ಸುಂದರ್, ಟಿಮ್ ಸೌಥಿ, ಗುರುಕೀರತ್ ಸಿಂಗ್ ಮಾನ್, ಹೆನ್ರಿಚ್ ಕ್ಲಾಸನ್, ಅಕ್ಷದೀಪ್ ನಾಥ್, ಕುಲವಂತ ಖೆಜ್ರೋಲಿಯಾ.

ಸನ್‌ರೈಸರ್ಸ್‌ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಡೇವಿಡ್ ವಾರ್ನರ್, ಜಾನಿ ಬೆಸ್ಟೊ, ಮನೀಷ್ ಪಾಂಡೆ, ವಿಜಯಶಂಕರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್, ಮಾರ್ಟಿನ್ ಗಪ್ಟಿಲ್, ವೃದ್ಧಿಮಾನ್ ಸಹಾ, ಬಿಲಿ ಸ್ಟಾನ್‌ಲೇಕ್, ಶಕೀಬ್ ಅಲ್ ಹಸನ್, ಬಾಸಿಲ್ ಥಂಪಿ, ಶ್ರೀವತ್ಸ ಗೋಸ್ವಾಮಿ. ದೀಪಕ್ ಹೂಡಾ.

ಪಂದ್ಯ ಆರಂಭ: ಸಂಜೆ 4

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.