ADVERTISEMENT

ಶಾರ್ಟ್‌ಪಿಚ್‌ ಎಸೆತಗಳಿಗೆ ಹೆದರುವುದಿಲ್ಲ: ಸ್ಟೀವನ್‌ ಸ್ಮಿತ್

ಪಿಟಿಐ
Published 14 ನವೆಂಬರ್ 2020, 8:40 IST
Last Updated 14 ನವೆಂಬರ್ 2020, 8:40 IST
ಸ್ಟೀವನ್‌ ಸ್ಮಿತ್‌–ಪಿಟಿಐ ಚಿತ್ರ
ಸ್ಟೀವನ್‌ ಸ್ಮಿತ್‌–ಪಿಟಿಐ ಚಿತ್ರ   

ಮೆಲ್ಬರ್ನ್‌: ‘ವೃತ್ತಿಜೀವನದ ಹಲವು ಸಂದರ್ಭಗಳಲ್ಲಿ ಶಾರ್ಟ್‌ ಪಿಚ್‌ ಎಸೆತಗಳನ್ನು ಎದುರಿಸಿದ್ದೇನೆ. ಮುಂಬರುವ ಸರಣಿಯಲ್ಲಿ ಭಾರತದ ವೇಗಿಗಳು ಇಂತಹ ಎಸೆತಗಳನ್ನು ಪ್ರಯೋಗಿಸಿದರೆ ಎದೆಗುಂದುವುದಿಲ್ಲ‘ ಎಂದು ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ ಹೇಳಿದ್ದಾರೆ.

‘ಒಂದು ವೇಳೆ ಭಾರತದ ವೇಗಿಗಳು ಶಾರ್ಟ್‌ಪಿಚ್‌ ಎಸೆತಗಳಿಂದ ಕೆಣಕಲು ಪ್ರಯತ್ನಿಸಿದರೆ ಅದು ನಮ್ಮ ತಂಡಕ್ಕೇ ಅನುಕೂಲವಾಗಲಿದೆ’ ಎಂದು ಸುದ್ದಿಸಂಸ್ಥೆಯೊಂದಕ್ಕೆ ಸ್ಮಿತ್‌ ಹೇಳಿದ್ದಾರೆ.

2019–20ರ ಋತುವಿನಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ ಸ್ಮಿತ್, ಎಡಗೈ ವೇಗಿ ನೀಲ್‌ ವ್ಯಾಗ್ನರ್‌ ಅವರಿಗೆ ನಾಲ್ಕು ಬಾರಿ ವಿಕೆಟ್‌ ಒಪ್ಪಿಸಿದ್ದರು. ಸ್ಮಿತ್‌ ದೇಹವನ್ನೇ ಗುರಿಯಾಗಿಸಿಕೊಂಡು, ನಿರಂತರವಾಗಿ ಶಾರ್ಟ್‌ಪಿಚ್‌ ಎಸೆತಗಳ ಮೂಲಕ ವ್ಯಾಗ್ನರ್‌ ಕಂಗೆಡಿಸಿದ್ದರು. ಅದಾಗ್ಯೂ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ 43 ಸರಾಸರಿಯಲ್ಲಿ ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

ADVERTISEMENT

‘ಪರಿಸ್ಥಿತಿಗೆ ತಕ್ಕಂತೆ ನಾನು ಆಟವಾಡುತ್ತೇನೆ. ನನ್ನ ವಿಕೆಟ್‌ ಪಡೆಯಲು ಅವರು ಮಾಡುವ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವ ಸಾಮರ್ಥ್ಯವಿದೆ‘ ಎಂದು ಸ್ಮಿತ್ ವಿಶ್ವಾಸ ವ್ಯಕ್ತಪಡಿಸಿದರು.

‘ಹಲವು ತಂಡಗಳು ನನ್ನ ಮೇಲೆ ಶಾರ್ಟ್‌ ಪಿಚ್‌ ಎಸೆತಗಳ ಪ್ರಯೋಗ ನಡೆಸಿವೆ. ಆದರೆ ವ್ಯಾಗ್ನರ್ ಅವರಂತೆಯೇ ಬೌಲ್‌ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಅವರಲ್ಲಿ ಅದ್ಭುತ ಕೌಶಲ್ಯವಿದೆ‘ ಎಂದು ಸ್ಮಿತ್ ನುಡಿದರು.

ಭಾರತ ತಂಡವು ತಲಾ ಮೂರು ಪಂದ್ಯಗಳ ಟ್ವೆಂಟಿ–20 ಹಾಗೂ ಏಕದಿನ ಸರಣಿಯಲ್ಲಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳಿದೆ. ನವೆಂಬರ್‌ 27ರಂದು ಏಕದಿನ ಪಂದ್ಯದ ಮೂಲಕ ಸರಣಿ ಆರಂಭವಾಗಲಿದೆ.

ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಶಮಿ ಅವರು ಭಾರತ ತಂಡದ ವೇಗದ ಬೌಲಿಂಗ್‌ ನೇತೃತ್ವ ವಹಿಸಲಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಗಾಯಗೊಂಡಿರುವ ಇಶಾಂತ್‌ ಶರ್ಮಾ ಗುಣಮುಖರಾದರೆ ಅವರೂ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಉಮೇಶ್‌ ಯಾದವ್‌ ಹಾಗೂ ಭರವಸೆಯ ಆಟಗಾರ ನವದೀಪ್ ಸೈನಿ ಕೂಡ ಟೆಸ್ಟ್‌ ತಂಡದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.