ADVERTISEMENT

ತಂಡದಲ್ಲಿ ಸುರಕ್ಷತೆ, ಸಂತಸ ಭಾವ ಮೂಡಿಸುವುದೇ ಗುರಿ: ಶುಭಮನ್ ಗಿಲ್

ಭಾರತ ಟೆಸ್ಟ್ ತಂಡದ ಯುವಸರದಾರ ಶುಭಮನ್ ಗಿಲ್ ಆಶಯ

ಪಿಟಿಐ
Published 16 ಜೂನ್ 2025, 1:13 IST
Last Updated 16 ಜೂನ್ 2025, 1:13 IST
ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್  –ಪಿಟಿಐ ಚಿತ್ರ
ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್  –ಪಿಟಿಐ ಚಿತ್ರ   

ಲಂಡನ್: ಭಾರತ ಕ್ರಿಕೆಟ್ ತಂಡದಲ್ಲಿ ಪ್ರತಿಯೊಬ್ಬ ಆಟಗಾರ ‘ಸುರಕ್ಷಿತ ಮತ್ತು ಸಂತಸ’ದಿಂದ ಇರಬೇಕು. ‘ಸಂಘಟಿತ ಸಂಸ್ಕೃತಿ’ ನೆಲೆಗೊಳಿಸಬೇಕು ಎಂಬ ಗುರಿಯನ್ನು ಯುವನಾಯಕ ಶುಭಮನ್ ಗಿಲ್ ಇಟ್ಟುಕೊಂಡಿದ್ದಾರಂತೆ.

ಇದೇ 20ರಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ತಂಡವನ್ನು ಗಿಲ್ ಮುನ್ನಡೆಸಲಿದ್ದಾರೆ. ಮೊದಲ ಪಂದ್ಯವು ಲೀಡ್ಸ್‌ನಲ್ಲಿ ನಡೆಯಲಿದೆ. 2007ರ ನಂತರ ಇಂಗ್ಲೆಂಡ್ ನೆಲದಲ್ಲಿ ಭಾರತ ತಂಡವು ಪ್ರಶಸ್ತಿ ಜಯಿಸಿಲ್ಲ.

‘ನಾನು ಇಷ್ಟು ಬೇಗ ತಂಡಕ್ಕೆ ನಾಯಕನಾಗುತ್ತೇನೆ ಎಂದು ಕನಸಿನಲ್ಲಿ ಅಂದುಕೊಂಡಿರಲಿಲ್ಲ. ಟ್ರೋಫಿ ಮತ್ತು  ಪ್ರಶಸ್ತಿಗಳ ಗೆಲುವು ಒಂದು ಕಡೆ ಇರಲಿ. ಆಟಗಾರರಲ್ಲಿ ಭದ್ರತೆ ಮತ್ತು ಸಂತಸದ ಭಾವ ಮೂಡಿಸುವುದಕ್ಕೆ ನನ್ನ ಆದ್ಯತೆ. ಒಟ್ಟಿನಲ್ಲಿ ತಂಡದಲ್ಲಿ ಆರೋಗ್ಯಪೂರ್ಣ ವಾತಾವರಣವಿರುವಂತೆ ಮಾಡುವುದೇ ಪ್ರಮುಖ ಗುರಿ’ ಎಂದು ಗಿಲ್ ಸ್ಕೈ ಸ್ಪೋರ್ಟ್ಸ್‌ ವಾಹಿನಿಗೆ ಹೇಳಿದರು. 

ADVERTISEMENT

‘ಈ ಗುರಿಯನ್ನು ಸಾಧಿಸುವುದು ಇಂದಿನ ವಾತಾವರಣದಲ್ಲಿ ಎಷ್ಟು ಕಠಿಣ ಎಂಬುದರ ಅರಿವು ನನಗಿದೆ. ಪ್ರಸ್ತುತ ನಾವು ಆಡುವ ಪಂದ್ಯಗಳ ಸಂಖ್ಯೆ, ಅಪಾರ ಸ್ಪರ್ಧೆ ಇದೆ. ಒಂದೊಮ್ಮೆ ಅಂದುಕೊಂಡ ಗುರಿಯನ್ನು ಸಾಧಿಸಿದರೆ ಎಲ್ಲ ರೀತಿಯಿಂದಲೂ ಒಳ್ಳೆಯದು. ತಂಡದಲ್ಲಿ ಸುರಕ್ಷತಾ ಭಾವ ಇರಬೇಕು. ಪ್ರತಿಯೊಬ್ಬ ಆಟಗಾರನ ಸಾಮರ್ಥ್ಯವನ್ನು ಗುರುತಿಸುವ ಕಾರ್ಯವನ್ನು ನಾಯಕರಾದವರು ಮಾಡಬೇಕು’ ಎಂದರು. 

‘ರೋಹಿತ್ (ಶರ್ಮಾ) ಅವರು ತಮ್ಮ ತಂತ್ರಗಾರಿಕೆಯಲ್ಲಿ ಬಹಳ  ಆಕ್ರಮಣಶೀಲರಾಗಿದ್ದರು. ಪಂದ್ಯಗಳಿಗೂ ಮುನ್ನ ಅವರ ಸಂವಹನವು ಸ್ಪಷ್ಟತೆಯಿಂದ ಕೂಡಿರುತ್ತಿತ್ತು. ಸರಣಿ ನಡೆಯುವ ಹೊತ್ತಿನಲ್ಲಿ ಮತ್ತು ನಂತರದಲ್ಲಿ ಅವರು ತಾವು ನಾಯಕರಾಗಿ ತಂಡದ ಆಟಗಾರರಿಂದ ಏನು ನಿರೀಕ್ಷಿಸುತ್ತಿದ್ದಾರೆಂಬುದನ್ನು ಸ್ಪಷ್ಟವಾಗಿ ಹೇಳುತ್ತಿದ್ದರು.  ಅವರು ತಂಡದಲ್ಲಿ ಸೌಹಾರ್ದ ವಾತಾವರಣ ಮೂಡಿಸಿದ್ದರು. ಅವರ ವ್ಯಕ್ತಿತ್ವವು ಎಲ್ಲರಿಗೂ ಹೃದಯಸ್ಪರ್ಶಿಯಾಗಿತ್ತು’ ಎಂದು ಗಿಲ್ ಹೇಳಿದರು. 

ಈಚೆಗೆ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಗಿಲ್ ಅವರಿಗೆ ತಂಡದ ನಾಯಕಪಟ್ಟ ಕಟ್ಟಲಾಗಿತ್ತು. 25 ವರ್ಷದ ಗಿಲ್ ಅವರಿಗೆ ನಾಯಕರಾಗಿ ಇಂಗ್ಲೆಂಡ್ ಸರಣಿ ಮೊದಲ ಸವಾಲಾಗಿದೆ. 

ಮುಖ್ಯ ಕೋಚ್ ಗೌತಮ್ ಗಂಭೀರ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಿಲ್, ‘ಅವರು (ಗಂಭೀರ್) ಅಪಾರ ಬದ್ಧತೆಯುಳ್ಳವರು. ಸ್ಪಷ್ಟ ಸಂವಹನಕಾರ. ಆಟಗಾರರಿಂದ ತಾವು ಇಟ್ಟುಕೊಂಡಿರುವ ನಿರೀಕ್ಷೆಯನ್ನು ನೇರವಾಗಿ ಹೇಳುತ್ತಾರೆ. ಆಟಗಾರರ ನಡವಳಿಕೆ, ಮನಸ್ಥಿತಿಯನ್ನು ಹೆಚ್ಚು ಗಮನಿಸುತ್ತಾರೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.