ADVERTISEMENT

ಕೋವಿಡ್‌ ಭೀತಿ ನಡುವೆಯೂ ಖಾಕಿ ತೊಟ್ಟು ಜೋಗಿಂದರ್‌ ಶರ್ಮಾ ಕೆಲಸ: ಐಸಿಸಿ ಮೆಚ್ಚುಗೆ

2007ರ ಟ್ವೆಂಟಿ–20 ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದ ಕ್ರಿಕೆಟಿಗ

ಪಿಟಿಐ
Published 29 ಮಾರ್ಚ್ 2020, 13:18 IST
Last Updated 29 ಮಾರ್ಚ್ 2020, 13:18 IST
ಜೋಗಿಂದರ್‌ ಶರ್ಮಾ
ಜೋಗಿಂದರ್‌ ಶರ್ಮಾ   

ನವದೆಹಲಿ: ಕೋವಿಡ್‌ ಭೀತಿಯ ನಡುವೆಯೂ ಖಾಕಿ ತೊಟ್ಟು ದಿಟ್ಟತನದಿಂದ ಕೆಲಸ ಮಾಡುತ್ತಿರುವ ಜೋಗಿಂದರ್‌ ಶರ್ಮಾ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಶ್ಲಾಘಿಸಿದೆ.

2007ರ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಜೋಗಿಂದರ್‌ ಅವರ ಪಾತ್ರ ಮಹತ್ವದ್ದಾಗಿತ್ತು. ವಾಂಡರರ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ ಅಂತಿಮ ಓವರ್‌ನಲ್ಲಿ 13 ರನ್‌ಗಳು ಬೇಕಿದ್ದವು. ಆ ಓವರ್‌ ಬೌಲ್‌ ಮಾಡಿದ್ದ ಜೋಗಿಂದರ್‌, ಕೇವಲ ಏಳು ರನ್‌ ಬಿಟ್ಟುಕೊಟ್ಟಿದ್ದರು. ಮಿಸ್ಬಾ ಉಲ್‌ ಹಕ್‌ ಅವರ ವಿಕೆಟ್‌ ಕೂಡ ಉರುಳಿಸಿದ್ದರು. ಅದೇ ವರ್ಷ ಅವರು ಹರಿಯಾಣ ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆಗೆ ನೇಮಕಗೊಂಡಿದ್ದರು.

‘2007ರಿಂದಲೂ ಡಿಎಸ್‌ಪಿಯಾಗಿ ಕೆಲಸ ಮಾಡುತ್ತಿದ್ದೇನೆ. ಲಾಕ್‌ಡೌನ್‌ನಿಂದಾಗಿ ಈಗ ಹಿಸಾರ್‌ನಲ್ಲಿ ಬಂದೋಬಸ್ತ್‌ ನೋಡಿಕೊಳ್ಳುತ್ತಿದ್ದೇನೆ. ಬೆಳಿಗ್ಗೆ ಆರು ಗಂಟೆಯಿಂದಲೇ ನಮ್ಮ ಕೆಲಸ ಆರಂಭವಾಗುತ್ತದೆ. ಪ್ರಮುಖ ರಸ್ತೆಗಳಲ್ಲಿ ಗಸ್ತು ಹೊಡೆದು ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ಕೆಲ ಪುಂಡರು ಪರಿಸ್ಥಿತಿಯ ಗಂಭೀರತೆಯನ್ನು ಅರಿಯದೆ ಸುಖಾ ಸುಮ್ಮನೆ ರಸ್ತೆಗಳಲ್ಲಿ ಅಡ್ಡಾಡುತ್ತಾರೆ. ಅವರಿಗೆ ಕಿವಿಮಾತು ಹೇಳಿ ಮನೆಗೆ ಕಳುಹಿಸುತ್ತಿದ್ದೇನೆ’ ಎಂದು ಜೋಗಿಂದರ್‌ ಕೆಲ ದಿನಗಳ ಹಿಂದೆ ಹೇಳಿದ್ದರು.

ADVERTISEMENT

‘ಜಗತ್ತು ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ಜೋಗಿಂದರ್ ಖಾಕಿ ಧರಿಸಿ ಜನರ ರಕ್ಷಣೆಗೆ ನಿಂತಿದ್ದಾರೆ. ಕೊರೊನಾ ಮಹಾಮಾರಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಅವರ ಈ ಕಾರ್ಯ ಮೆಚ್ಚುವಂತಹದ್ದು’ ಎಂದು ಐಸಿಸಿ ಶನಿವಾರ ಟ್ವೀಟ್‌ ಮಾಡಿದೆ.

36 ವರ್ಷ ವಯಸ್ಸಿನ ಜೋಗಿಂದರ್‌ 2004ರಿಂದ 2007ರ ಅವಧಿಯಲ್ಲಿ ತಲಾ ನಾಲ್ಕು ಏಕದಿನ ಹಾಗೂ ಟ್ವೆಂಟಿ–20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.