ADVERTISEMENT

ಟಿ20 ವಿಶ್ವಕಪ್ ಆಯೋಜನೆ: ಮುಂದಿನ ತಿಂಗಳು ನಿರ್ಧಾರ

ತೆರಿಗೆ ವಿನಾಯಿತಿ ಪಡೆಯಲು ಬಿಸಿಸಿಐಗೆ ಐಸಿಸಿ ಗಡುವು

ಪಿಟಿಐ
Published 10 ಜೂನ್ 2020, 16:25 IST
Last Updated 10 ಜೂನ್ 2020, 16:25 IST
ಮನು ಸವಾನಿ
ಮನು ಸವಾನಿ   

ನವದೆಹಲಿ: ಈ ವರ್ಷದ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯು ರದ್ದಾಗುವುದೋ, ಮುಂದೂಡಲಾಗುವುದೋ ಅಥವಾ ನಿಗದಿತ ಸಮಯಕ್ಕೆ ನಡೆಯುವುದೋ ಎಂಬ ಪ್ರಶ್ನೆಗಳಿಗೆ ಬುಧವಾರವೂ ಉತ್ತರ ದೊರೆಯಲಿಲ್ಲ.

ತೀವ್ರ ಕುತೂಹಲ ಮೂಡಿಸಿದ್ದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಈ ಕುರಿತು ನಿರ್ಧಾರವನ್ನು ಕೈಗೊಳ್ಳಲಿಲ್ಲ. ಇನ್ನು ಒಂದು ತಿಂಗಳು ಪರಿಸ್ಥಿತಿ ಅವಲೋಕನ ನಡೆಸಿ ನಂತರ ನಿರ್ಣಯಿಸಲು ಒಮ್ಮತ ವ್ಯಕ್ತವಾಯಿತು. ಇದರಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಯ ಕುರಿತು ನಿರ್ಧರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ ಅಲ್ಲಿಯವರೆಗೂ ಕಾಯಲೇಬೇಕಾದ ಅನಿವಾರ್ಯತೆ ಇದೆ.

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್–ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ನಿಗದಿಯಾಗಿದೆ. ಆದರೆ ಕೊರೊನಾ ವೈರಸ್‌ ಹಾವಳಿಯು ಬಹಳಷ್ಟು ದೇಶಗಳಲ್ಲಿದೆ. ಲಾಕ್‌ಡೌನ್ ಮತ್ತಿತರ ನಿರ್ಬಂಧಗಳು ಇರುವುದರಿಂದ ವಿಶ್ವಕಪ್ ಟೂರ್ನಿ ಆಯೋಜಿಸುವ ಕುರಿತು ಅನಿಶ್ಚಿತತೆ ಮೂಡಿದೆ. ಈ ಕುರಿತು ನಿರ್ಧಾರ ಕೈಗೊಳ್ಳಲು ಹೋದ ವಾರವೂ ಐಸಿಸಿ ಸಭೆ ನಡೆಸಿತ್ತು. ಆಗ ಜೂನ್ 10ರಂದು ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಿತ್ತು. ಈಗ ಮತ್ತೊಮ್ಮೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದೇ ಮುಂದಿನ ತಿಂಗಳವರೆಗೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ADVERTISEMENT

‘ಒಂದೇ ಬಾರಿ ನಿರ್ಣಯ ಕೈಗೊಳ್ಳುವ ಅವಕಾಶ ಇರುತ್ತದೆ. ಪದೇ ಪದೇ ಬದಲಾಯಿಸಲು ಬರುವುದಿಲ್ಲ. ಆದ್ದರಿಂದ ತೀರ್ಮಾನ ಮಾಡುವ ಮುನ್ನ ಬಹಳಷ್ಟು ಯೋಚನೆ ಮಾಡಿ ಮುಂದುವರಿಯಬೇಕು. ಮುಂದಿನ ಸಭೆಯವರೆಗೂ ನಮ್ಮ ಎಲ್ಲ ಸದಸ್ಯರು, ಪ್ರಸಾರಕ ಸಂಸ್ಥೆಗಳು, ಪಾಲುದಾರರು, ಸರ್ಕಾರಗಳು ಮತ್ತು ಆಟಗಾರರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸುತ್ತೇವೆ. ಆಮೇಲೆ ಎಲ್ಲರಿಗೂ ಸಮ್ಮತವಾಗುವಂತಹ ಒಳ್ಳೆಯ ಮತ್ತು ಗಟ್ಟಿಯಾದ ತೀರ್ಮಾನಕ್ಕೆ ಬರುತ್ತೇವೆ’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನು ಸವಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲವು ದಿನಗಳಿಂದ ಬಿಸಿಸಿಐ ಮತ್ತು ಐಸಿಸಿ ನಡುವೆ ತೆರಿಗೆ ವಿನಾಯಿತಿ ವಿಚಾರದಲ್ಲಿ ನಡೆಯುತ್ತಿರುವ ಜಟಾಪಟಿಗೆ ತೆರೆ ಎಳೆಯುವ ಪ್ರಯತ್ನವನ್ನು ಸಭೆಯಲ್ಲಿ ಮಾಡಲಾಯಿತು.

ಭಾರತದಲ್ಲಿ ಐಸಿಸಿ ಟೂರ್ನಿಗಳಿಗೆ ಆತಿಥ್ಯ ವಹಿಸಲು, ಬಿಸಿಸಿಐ ಕೇಂದ್ರ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆದು, ಐಸಿಸಿಗೆ ಪ್ರಸ್ತಾವ ಸಲ್ಲಿಸಲು ಡಿಸೆಂಬರ್‌ವರೆಗೆ ಗಡುವು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.