ADVERTISEMENT

ಕೋವಿಡ್‌–19ರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅತಂತ್ರ

ರಾಯಿಟರ್ಸ್
Published 27 ಜುಲೈ 2020, 16:47 IST
Last Updated 27 ಜುಲೈ 2020, 16:47 IST
ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಟೆಸ್ಟ್ ಚಾಂಪಿಯನ್‌ಷಿಪ್‌ನ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ –ಎಎಫ್‌ಪಿ ಚಿತ್ರ
ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಟೆಸ್ಟ್ ಚಾಂಪಿಯನ್‌ಷಿಪ್‌ನ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ –ಎಎಫ್‌ಪಿ ಚಿತ್ರ   

ಮುಂಬೈ: ಕೋವಿಡ್ –19ರಿಂದ ಉಂಟಾಗಿರುವ ವಿಷಮ ಸ್ಥಿತಿಯಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭವಿಷ್ಯ ಅತಂತ್ರವಾಗಿದ್ದು ಸ್ಪರ್ಧೆಯಲ್ಲಿರುವ ತಂಡಗಳು ವೇಳಾಪಟ್ಟಿಯನ್ನು ಮರುನಿಗದಿ ಮಾಡುವುದರ ಮೇಲೆ ಚಾಂಪಿಯನ್‌ಷಿಪ್‌ನ ಭವಿಷ್ಯ ಉಳಿದಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ತಿಳಿಸಿದೆ.

ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಸ್ಥಾನ ಗಳಿಸುವ ಎರಡು ತಂಡಗಳ ನಡುವೆ ಮುಂದಿನ ವರ್ಷದ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ಫೈನಲ್ ಪಂದ್ಯ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್‌ –19ರಿಂದಾಗಿ ಈಗಾಗಲೇ ಅನೇಕ ಅಂತರರಾಷ್ಟ್ರೀಯ ಪಂದ್ಯಗಳನ್ನು ಮುಂದೂಡಲಾಗಿದೆ. ಕೊರೊನಾ ಹಾವಳಿ ನಿಯಂತ್ರಣಕ್ಕೆ ಬಂದ ನಂತರ ಅವುಗಳಿಗೆ ಸಮಯ ನಿಗದಿ ಮಾಡಬೇಕಾಗುತ್ತದೆ. ಆದ್ದರಿಂದ ಚಾಂಪಿಯನ್‌ಷಿಪ್‌ನಲ್ಲಿ ಉಳಿರುವ ಪಂದ್ಯಗಳನ್ನು ಯಾವಾಗ ನಡೆಸಬೇಕು ಎಂಬುದು ಗೊಂದಲ ಮೂಡಿಸಿದೆ.

‘ಸರಣಿಗಳ ಮರುನಿಗದಿಗೆ ಸಂಬಂಧಿಸಿ ಐಸಿಸಿ ಸದಸ್ಯರ ಜೊತೆ ನಿರಂತರ ಮಾತುಕತೆ ನಡೆಯುತ್ತಿದೆ. ಅವರು ನೀಡುವ ಮಾಹಿತಿಗಳ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಐಸಿಸಿ ಪ್ರಧಾನ ವ್ಯವಸ್ಥಾಪಕ ಜೆಫ್‌ ಅಲಾಡಿಸ್ ವಿಡಿಯೊ ಸಂದರ್ಶನದಲ್ಲಿ ತಿಳಿಸಿದರು.

ADVERTISEMENT

ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ಅಗ್ರ ಕ್ರಮಾಂಕದ ಒಂಬತ್ತು ತಂಡಗಳು ಚಾಂಪಿಯನ್‌ಷಿಪ್‌ನಲ್ಲಿ ಸೆಣಸುತ್ತಿದ್ದು ತವರಿನಲ್ಲಿ ಮತ್ತು ಹೊರಗೆ ತಲಾ ಮೂರು ಸರಣಿಗಳನ್ನು ಆಡಬೇಕು. ಕೆಲವು ಸರಣಿಗಳು ಈಗಾಗಲೇ ಮುಗಿದಿವೆ. ಭಾರತವು ಸದ್ಯ ಪಾಯಿಂಟ್ ಪಟ್ಟಿಯ ಮೊದಲ ಸ್ಥಾನದಲ್ಲಿದ್ದು ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.