ADVERTISEMENT

ದ್ವಿಸ್ತರ ಟೆಸ್ಟ್‌: ಪರಿಶೀಲನೆಗೆ ಸಮಿತಿ ರಚಿಸಿದ ಐಸಿಸಿ

ಸಮಿತಿಗೆ ಸಂಜೋಗ್‌ ಗುಪ್ತಾ ನೇತೃತ್ವ

ಪಿಟಿಐ
Published 21 ಜುಲೈ 2025, 14:23 IST
Last Updated 21 ಜುಲೈ 2025, 14:23 IST
ಐಸಿಸಿ ಲೋಗೊ
ಐಸಿಸಿ ಲೋಗೊ   

ಲಂಡನ್‌: ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ವಿಸ್ತರ ವ್ಯವಸ್ಥೆ ರೂಪಿಸುವುದಕ್ಕೆ ಸಂಬಂಧಿಸಿ ಸಾಧ್ಯತೆ ಪರಿಶೀಲಿಸಲು ಐಸಿಸಿಯು ತನ್ನ ಸಿಇಒ ಸಂಜೋಗ್‌ ಗುಪ್ತಾ ನೇತೃತ್ವದಲ್ಲಿ ಎಂಟು ಮಂದಿ ಸದಸ್ಯರ ಸಮಿತಿಯನ್ನು ರಚಿಸಿದೆ.

ಸಿಂಗಪುರದಲ್ಲಿ ನಡೆದ ಐಸಿಸಿಯ ವಾರ್ಷಿಕ ಮಹಾಸಭೆಯಲ್ಲಿ ಈ ಸಮಿತಿ ರಚಿಸಲಾಯಿತು. ಜಯ್‌ ಶಾ ಅಧ್ಯಕ್ಷತೆಯ ಐಸಿಸಿಗೆ ಈ ತಿಂಗಳ ಆರಂಭದಲ್ಲಿ ಗುಪ್ತಾ ಅವರು ಸಿಇಒ ಆಗಿ ನೇಮಕಗೊಂಡಿದ್ದರು.

ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಚೀಫ್‌ ಎಕ್ಸಿಕ್ಯೂಟಿವ್‌ ರಿಚರ್ಡ್‌ ಗೌಲ್ಡ್‌, ಕ್ರಿಕೆಟ್‌ ಆಸ್ಟ್ರೇಲಿಯಾ ಚೀಫ್‌ ಎಕ್ಸಿಕ್ಯೂಟಿವ್‌ ಟಾಡ್‌ ಗ್ರೀನ್‌ಬರ್ಗ್ ಅವರು ಸಮಿತಿ ಸದಸ್ಯರಲ್ಲಿ ಒಳಗೊಂಡಿದ್ದಾರೆ ಎಂದು ‘ಗಾರ್ಡಿಯನ್‌’ ವರದಿ ತಿಳಿಸಿದೆ. ಈ ವರ್ಷದ ಅಂತ್ಯದೊಳಗೆ ಶಿಫಾರಸುಗಳನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. 2027 ರಿಂದ 2029ರ ಅವಧಿಯ ವಿಶ್ವ ಚಾಂಪಿಯನ್‌ಷಿಪ್‌ಗೆ ಪ್ರಬಲ ತಂಡಗಳನ್ನು ಒಂದು ಕಡೆ, ಕೆಳಕ್ರಮಾಂಕದ ತಂಡಗಳನ್ನು ಇನ್ನೊಂದು ಕಡೆ ವಿಭಜಿಸಲು ಐಸಿಸಿ ಮುಂದಾಗಿದೆ.

ADVERTISEMENT

ಸಿಎ ಮತ್ತು ಇಸಿಬಿ ಮುಖ್ಯಸ್ಥರನ್ನು ಸದಸ್ಯರನ್ನಾಗಿ ನೇಮಕ ಮಾಡಿರುವ ಕ್ರಮ, ಈ ಎರಡು ತಂಡಗಳು ದ್ವಿಸ್ತರದ ಪ್ರಬಲ ಪ್ರತಿಪಾದಕ ಎನ್ನುವುದನ್ನು ಸೂಚಿಸುವಂತಿದೆ.

‌ಸಿಎಲ್‌ ಟಿ20:

10 ವರ್ಷಗಳ ದೀರ್ಘ ಅವಧಿಯ ನಂತರ ಕ್ಲಬ್‌ಗಳನ್ನು ಒಳಗೊಳ್ಳುವ ಚಾಂಪಿಯನ್ಸ್‌ ಲೀಗ್‌ ಟಿ20 (ಸಿಎಲ್‌ಟಿ20) ಟೂರ್ನಿಗೆ ಮರುಜೀವ ನೀಡಲು ಐಸಿಸಿ ಪರಿಶೀಲಿಸುತ್ತಿದೆ. ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಇದಕ್ಕೆ ಪುನಶ್ಚೇತನ ನೀಡಲು ಆಸಕ್ತಿ ವಹಿಸಿವೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ ತಿಳಿಸಿದೆ.

2014ರ ಸಿಎಲ್‌ಟಿ20 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿತ್ತು. ಬೆಂಗಳೂರಿನಲ್ಲಿ ನಡೆದ ಫೈನಲ್‌ನಲ್ಲಿ ಚೆನ್ನೈ ತಂಡವು, ಕೋಲ್ಕತ್ತ ನೈಟರ್‌ ರೈಡರ್ಸ್‌ ತಂಡವನ್ನು ಸೋಲಿಸಿತ್ತು. ಆ ಬಾರಿಯ ಲೀಗ್‌ನಲ್ಲಿ ಭಾರತದ ಜೊತೆಗೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದ ತಲಾ ಎರಡು ತಂಡಗಳು, ಪಾಕಿಸ್ತಾನ, ವೆಸ್ಟ್‌ ಇಂಡೀಸ್ ಮತ್ತು ನ್ಯೂಜಿಲೆಂಡ್‌ನ ಒಂದೊಂದು ತಂಡಗಳು ಭಾಗವಹಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.