ADVERTISEMENT

ನಾಲ್ಕು ದಿನಗಳ ಟೆಸ್ಟ್‌ ಬಗ್ಗೆ ಮಾರ್ಚ್‌ನಲ್ಲಿ ಚರ್ಚೆ: ಕುಂಬ್ಳೆ

ಪಿಟಿಐ
Published 6 ಜನವರಿ 2020, 14:41 IST
Last Updated 6 ಜನವರಿ 2020, 14:41 IST
ಅನಿಲ್‌ ಕುಂಬ್ಳೆ
ಅನಿಲ್‌ ಕುಂಬ್ಳೆ   

ಇಂದೋರ್‌: ‘ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ನಾಲ್ಕು ದಿನಗಳ ಟೆಸ್ಟ್‌ ಪ್ರಸ್ತಾವದ ಕುರಿತು ಈ ವರ್ಷದ ಮಾರ್ಚ್‌ ತಿಂಗಳಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸುವುದಾಗಿ’ ಕ್ರಿಕೆಟ್‌ ಸಮಿತಿಯ ಮುಖ್ಯಸ್ಥ ಅನಿಲ್‌ ಕುಂಬ್ಳೆ ಹೇಳಿದ್ದಾರೆ.

‘ನಾನು ಕ್ರಿಕೆಟ್‌ ಸಮಿತಿಯ ಭಾಗವಾಗಿದ್ದೇನೆ. ಹೀಗಾಗಿ ಐಸಿಸಿಯ ಪ್ರಸ್ತಾವದ ಕುರಿತು ಬಹಿರಂಗವಾಗಿ ಏನನ್ನೂ ಹೇಳುವಂತಿಲ್ಲ. ಮಾರ್ಚ್‌ 27ರಿಂದ 31ರವರೆಗೆ ದುಬೈಯಲ್ಲಿ ಸಭೆ ನಿಗದಿಯಾಗಿದೆ. ಅದರಲ್ಲಿ ಈ ಕುರಿತು ಚರ್ಚೆ ನಡೆಸುತ್ತೇವೆ’ ಎಂದಿದ್ದಾರೆ.

ಕ್ರಿಕೆಟ್‌ ದಿಗ್ಗಜರಾದ ಆ್ಯಂಡ್ರ್ಯೂ ಸ್ಟ್ರಾಸ್‌, ರಾಹುಲ್‌ ದ್ರಾವಿಡ್‌, ಮಾಹೇಲ ಜಯವರ್ಧನೆ ಮತ್ತು ಶಾನ್‌ ಪೊಲಾಕ್‌ ಅವರೂ ಈ ಸಮಿತಿಯಲ್ಲಿದ್ದಾರೆ.

ADVERTISEMENT

ನಾಲ್ಕು ದಿನಗಳ ಟೆಸ್ಟ್‌ ಪ್ರಸ್ತಾವದ ಬಗ್ಗೆ ಈಗಾಗಲೇ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಇಂಗ್ಲೆಂಡ್‌, ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗಳು ಐಸಿಸಿಯ ಬೆಂಬಲಕ್ಕೆ ನಿಂತಿವೆ.

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಆಸ್ಟ್ರೇಲಿಯಾ ತಂಡದ ನಾಯಕ ಟಿಮ್‌ ಪೇನ್‌, ಆಫ್‌ ಸ್ಪಿನ್ನರ್‌ ನೇಥನ್‌ ಲಯನ್‌, ಹಿರಿಯ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌ ಮತ್ತು ರಿಕಿ ಪಾಂಟಿಂಗ್‌ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಕುರಿತು ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ 2023ರಿಂದ 2031ರ ಅವಧಿಯಲ್ಲಿ ನಾಲ್ಕು ದಿನಗಳ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಲು ಚಿಂತನೆ ನಡೆಸುತ್ತಿರುವುದಾಗಿ ಐಸಿಸಿ ಹೇಳಿತ್ತು. ಪಂದ್ಯಗಳ ಆಯೋಜನೆಯ ವೆಚ್ಚ, ಆಟಗಾರರ ಮೇಲಿನ ಹೊರೆ ಕಡಿಮೆ ಮಾಡುವುದು ಹಾಗೂ ಟೆಸ್ಟ್‌ನತ್ತ ಹೆಚ್ಚು ಅಭಿಮಾನಿಗಳನ್ನು ಸೆಳೆಯುವ ಉದ್ದೇಶಗಳಿಂದ ಈ ತೀರ್ಮಾನ ಕೈಗೊಳ್ಳಲು ನಿರ್ಧರಿಸಿರುವುದಾಗಿಯೂ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.