
ಬೆಂಗಳೂರು: ಈ ವರ್ಷದ ಅಕ್ಟೋಬರ್– ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಪೂರ್ವಭಾವಿಯಾಗಿ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ನಿಯೋಗ, ವಿಶ್ವಕಪ್ ಪಂದ್ಯ ನಡೆಯುವ ಸ್ಥಳಗಳಲ್ಲಿ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿದೆ.
ಪ್ರಸ್ತುತ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿರುವ ನಿಯೋಗವು ದಕ್ಷಿಣ ಭಾರತದ ಮೂರು ಕ್ರೀಡಾಂಗಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬೆಂಗಳೂರು, ಚೆನ್ನೈ, ತಿರುವನಂತಪುರದ ಜೊತೆಗೆ ಮುಂಬೈನ ವಾಂಖೆಡೆ ಕ್ರೀಡಾಂಗಣಗಳಲ್ಲಿ ತಂಡ ಭೇಟಿ ಕೊಟ್ಟಿದೆ. ತಿರುವನಂತಪುರದಲ್ಲಿ ಅಭ್ಯಾಸ ಪಂದ್ಯಗಳು ಮಾತ್ರ ನಡೆಯಲಿವೆ.
‘ಐಸಿಸಿಯ ತಂಡ ಶುಕ್ರವಾರ ಭೇಟಿ ನೀಡಿದ್ದು, ಇಲ್ಲಿರುವ ವ್ಯವಸ್ಥೆ, ನಡೆಸಿರುವ ಸಿದ್ಧತೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ. ನಾವು ದುಲೀಪ್ ಟ್ರೋಫಿಯ ಆತಿಥ್ಯ ವಹಿಸಿದ್ದೆವು. ನಾವು ವಿಶ್ವಕಪ್ ಪಂದ್ಯಗಳಿಗೂ ಸಜ್ಜಾಗಿದ್ದೇವೆ’ ಎಂದು ಕೆಎಸ್‌ಸಿಎ ಪದಾಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಬೆಂಗಳೂರಿನ ಕ್ರೀಡಾಂಗಣವು ಭಾರತ– ನೆದರ್ಲೆಂಡ್ ಪಂದ್ಯವೂ ಸೇರಿ ಐದು ಪಂದ್ಯಗಳ ಆತಿಥ್ಯ ವಹಿಸಲಿದೆ. ಪಾಕಿಸ್ತಾನ ತಂಡ ಇಲ್ಲಿ ಎರಡು ಪಂದ್ಯಗಳನ್ನು (ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್) ಆಡಲಿದೆ.
ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಆಡಲಿದೆ. ಚಿಪಾಕ್‌ನಲ್ಲಿ ಪಾಕಿಸ್ತಾನ ತಂಡ ಎರಡು ಪಂದ್ಯಗಳನ್ನು (ದಕ್ಷಿಣ ಆಫ್ರಿಕಾ ಮತ್ತು ಅಫ್ಗಾನಿಸ್ತಾನ ವಿರುದ್ಧ) ಆಡಲಿದೆ. ಐಸಿಸಿ ನಿಯೋಗವು ಎರಡು ದಿನಗಳ ಹಿಂದೆ (ಜುಲೈ 26) ಈ ಕ್ರೀಡಾಂಗಣಕ್ಕೆ ಭೇಟಿ ನೀಡಿದೆ.
ತಿರುವನಂತಪುರಂನಲ್ಲಿ ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆಯುವುದಿಲ್ಲ. ಆದರೆ ಕೆಲವು ಅಭ್ಯಾಸ ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ನೀಡಲಿದೆ. ಇಲ್ಲಿ ಶ್ರೀಲಂಕಾ ವಿರುದ್ಧ ಈ ವರ್ಷದ ಆರಂಭದಲ್ಲಿ ಏಕದಿನ ಪಂದ್ಯ ನಡೆದಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ–20 ಪಂದ್ಯವೂ ಇಲ್ಲಿ ಆಡಲಾಗಿತ್ತು.
ಐಸಿಸಿಯ ಪರಿಶೀಲನಾ ನಿಯೋಗವು ಕ್ರೀಡಾಂಗಣದೊಳಗೆ ಸುರಕ್ಷತಾ ವ್ಯವಸ್ಥೆ, ಪ್ರಸಾರ ತಂಡಗಳಿಗೆ ಇರುವ ವ್ಯವಸ್ಥೆ ಮತ್ತಿತರ ಏರ್ಪಾಡುಗಳ ಬಗ್ಗೆ ಮುಖ್ಯವಾಗಿ ಗಮನಹರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.