ADVERTISEMENT

ಆಸ್ಟ್ರೇಲಿಯಾ ಕ್ರಿಕೆಟ್‌ ಅನ್ನು ಬೆಳೆಸಿದ ಮಹಾನ್ ಆಟಗಾರ ಬಾಬ್ ಸಿಂಪ್ಸನ್: ಐಸಿಸಿ

ಪಿಟಿಐ
Published 17 ಆಗಸ್ಟ್ 2025, 14:40 IST
Last Updated 17 ಆಗಸ್ಟ್ 2025, 14:40 IST
ಬಾಬ್ ಸಿಂಪ್ಸನ್
ಬಾಬ್ ಸಿಂಪ್ಸನ್   

ದುಬೈ: ಬಾಬ್ ಸಿಂಪ್ಸನ್ ಅವರು ಕ್ರಿಕೆಟ್ ಆಟದ ನಿಜವಾದ ಮಹಾನ್ ಆಟಗಾರರಲ್ಲಿ ಪ್ರಮುಖರು. ಅವರ ಹಾಕಿಕೊಟ್ಟ ಪರಂಪರೆಯು ಅಮೋಘವಾದುದು. ಆಟಗಾರನಾಗಿ, ನಾಯಕನಾಗಿ ಮತ್ತು ನಂತರದಲ್ಲಿ ಕೋಚ್ ಆಗಿ ಅವರು ಆಸ್ಟ್ರೇಲಿಯಾ ಕ್ರಿಕೆಟ್ ಕ್ಷೇತ್ರವನ್ನು ಬೆಳೆಸಿದರು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸ್ಮರಿಸಿದೆ. 

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿನಾಯಕ ಬಾಬ್ ಸಿಂಪ್ಸನ್ (89) ಅವರು ಶನಿವಾರ ನಿಧನರಾದರು. ಕ್ರಿಕೆಟ್‌ಗೆ ಅವರ ಕಾಣಿಕೆಯನ್ನು ನೆನಪಿಸಿಕೊಂಡಿರುವ ಐಸಿಸಿ ಮುಖ್ಯಸ್ಥ ಜಯ್ ಶಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

‘ ಒಂದು ಪೀಳಿಗೆಯ ಆಟಗಾರರನ್ನು ಅವರು ಪ್ರಭಾವಿಸಿದರು. ತರಬೇತುಗೊಳಿಸಿ ಬೆಳೆಸಿದರು. ಅವರ ಮಾರ್ಗದರ್ಶನದಲ್ಲಿ ಬೆಳೆದ ಹಲವರು ಕ್ರಿಕೆಟ್ ಕ್ಷೇತ್ರದ ದಂತಕಥೆಗಳಾದರು. ಬಾಬ್ ಅವರ ಕಾಣಿಕೆ ಅಮೋಘವಾದುದು. ಅವರ ಅಗಲಿಕೆಯು ಕ್ರಿಕೆಟ್‌ಗೆ ದೊಡ್ಡ ನಷ್ಟವಾಗಿದೆ. ಅವರ ಕಾಣಿಕೆಯು ಸದಾ ಸ್ಮರಣೀಯ. ಅವರ ಕುಟುಂಬಕ್ಕೆ ಐಸಿಸಿ ಪರವಾಗಿ ಸಾಂತ್ವನ ಸಲ್ಲಿಸುತ್ತೇನೆ’ ಎಂದೂ ಶಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಐಸಿಸಿ ಹಾಲ್ ಆಫ್‌ ಫೇಮ್ ಗೌರವ ಗಳಿಸಿದ್ದ ಸಿಂಪ್ಸನ್ ಅವರು 62 ಟೆಸ್ಟ್‌ಗಳಲ್ಲಿ ಆಡಿದ್ದರು. 1957 ರಿಂದ 1978ರ ಅವಧಿಯಲ್ಲಿ ಅವರು ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. 10 ಶತಕ ಬಾರಿಸಿದ್ದರು. ಪರಿಣಾಮಕಾರಿ ಲೆಗ್‌ಸ್ಪಿನ್ನರ್ ಕೂಡ ಆಗಿದ್ದ ಅವರು 71 ವಿಕೆಟ್‌ಗಳನ್ನು ಗಳಿಸಿದ್ದರು. 

ನಿವೃತ್ತಿಯ ನಂತರ ಅವರು ಆಸ್ಟ್ರೇಲಿಯಾ ತಂಡದ ಪೂರ್ಣಾವಧಿ ಕೋಚ್ ಆಗಿದ್ದರು. ನಂತರ ರಾಷ್ಟ್ರೀಯ ತಂಡದ ಆಯ್ಕೆಗಾರನಾಗಿಯೂ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.