ADVERTISEMENT

ರ‍್ಯಾಂಕಿಂಗ್‌: ಎಂಟನೇ ಸ್ಥಾನಕ್ಕೇರಿದ ಚಾಹಲ್‌

ಪಿಟಿಐ
Published 2 ನವೆಂಬರ್ 2018, 12:51 IST
Last Updated 2 ನವೆಂಬರ್ 2018, 12:51 IST
ಯಜುವೇಂದ್ರ ಚಾಹಲ್‌
ಯಜುವೇಂದ್ರ ಚಾಹಲ್‌   

ದುಬೈ: ಭಾರತದ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌, ಶುಕ್ರವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಬೌಲರ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಇದು ಚಾಹಲ್‌ ಅವರ ವೃತ್ತಿಬದುಕಿನ ಶ್ರೇಷ್ಠ ಸಾಧನೆಯಾಗಿದೆ. ವೆಸ್ಟ್‌ ಇಂಡೀಸ್‌ ಎದುರಿನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಯಜುವೇಂದ್ರ, ಒಟ್ಟು ಮೂರು ಸ್ಥಾನ ಬಡ್ತಿ ಹೊಂದಿದ್ದಾರೆ.

ಭಾರತದ ಮತ್ತೊಬ್ಬ ಸ್ಪಿನ್ನರ್‌ ರವೀಂದ್ರ ಜಡೇಜ 25ನೇ ಸ್ಥಾನಕ್ಕೆ ಪ್ರಗತಿ ಕಂಡಿದ್ದಾರೆ. ವಿಂಡೀಸ್‌ ಎದುರಿನ ಸರಣಿಯಲ್ಲಿ ಏಳು ವಿಕೆಟ್‌ ಉರುಳಿಸಿದ್ದ ಅವರು 16ಸ್ಥಾನ ಏರಿದ್ದಾರೆ.

ADVERTISEMENT

ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು ಒಟ್ಟು 841 ಪಾಯಿಂಟ್ಸ್‌ ಕಲೆಹಾಕಿ ವೃತ್ತಿಬದುಕಿನ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಚೈನಾಮನ್‌ ಶೈಲಿಯ ಬೌಲರ್‌ ಕುಲದೀಪ್‌ ಯಾದವ್‌ ಮೂರನೇ ಸ್ಥಾನದಲ್ಲಿದ್ದಾರೆ. ಅವರ ಖಾತೆಯಲ್ಲಿ 723 ಪಾಯಿಂಟ್ಸ್‌ ಇವೆ.

ವಿರಾಟ್‌ಗೆ ಅಗ್ರಸ್ಥಾನ: ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ವಿಂಡೀಸ್‌ ಎದುರಿನ ಸರಣಿಯಲ್ಲಿ 453ರನ್‌ ಕಲೆಹಾಕಿದ್ದ ಅವರು ಸರಣಿ ಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದರು. ಈ ಮೂಲಕ ಒಟ್ಟು ಪಾಯಿಂಟ್ಸ್‌ ಅನ್ನು 899ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ರೋಹಿತ್‌ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ವಿಂಡೀಸ್‌ ಎದುರಿನ ಸರಣಿಯಲ್ಲಿ 389 ರನ್‌ ಗಳಿಸಿದ್ದ ರೋಹಿತ್‌, ಒಟ್ಟು ಪಾಯಿಂಟ್ಸ್‌ ಅನ್ನು 871ಕ್ಕೆ ಹೆಚ್ಚಿಸಿಕೊಂಡಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಒಂಬತ್ತನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು ನಾಲ್ಕು ಸ್ಥಾನ ಇಳಿದಿದ್ದಾರೆ.

ವೆಸ್ಟ್‌ ಇಂಡೀಸ್‌ ತಂಡದ ಶಾಯ್‌ ಹೋಪ್‌ ಮತ್ತು ಶಿಮ್ರೊನ್‌ ಹೆಟ್ಮೆಯರ್‌ ಅವರು ಕ್ರಮವಾಗಿ 25 ಮತ್ತು 26ನೇ ಸ್ಥಾನಗಳಿಗೆ ಬಡ್ತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.