ADVERTISEMENT

ಒಲಿಂಪಿಕ್ಸ್: ಆರು ತಂಡಗಳ ಟಿ20 ಸ್ಪರ್ಧೆಗೆ ಐಸಿಸಿ ಶಿಫಾರಸು

ಪಿಟಿಐ
Published 21 ಜನವರಿ 2023, 13:22 IST
Last Updated 21 ಜನವರಿ 2023, 13:22 IST
ಐಸಿಸಿ ಲೋಗೊ
ಐಸಿಸಿ ಲೋಗೊ   

ನವದೆಹಲಿ: ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಗೊಳಿಸುವ ವಿಶ್ವಾಸವನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ಹೊಂದಿದೆ. ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ಆರು ತಂಡಗಳ ಟಿ20 ಮಾದರಿ ಸ್ಪರ್ಧೆ ನಡೆಸಲು ಕ್ರೀಡಾಕೂಟದ ಆಯೋಜನಾ ಸಮಿತಿಗೆ ‘ಶಿಫಾರಸು’ ಮಾಡಿದೆ.

ಕ್ರಿಕೆಟ್‌ ಸೇರ್ಪಡೆ ಕುರಿತು ಅಂತಿಮ ನಿರ್ಧಾರವನ್ನು ಅಂತರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್‌ (ಐಒಸಿ) ಅಕ್ಟೋಬರ್‌ ವೇಳೆಗೆ ತೆಗೆದುಕೊಳ್ಳಲಿದೆ. ಹೊಸ ಕ್ರೀಡೆಗಳ ಸೇರ್ಪಡೆ ಕುರಿತು ಮಾರ್ಚ್‌ನಲ್ಲಿ ಪಟ್ಟಿ ತಯಾರಿಸಲಾಗುತ್ತದೆ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ವರದಿ ಮಾಡಿದೆ. ಮುಂಬೈನಲ್ಲಿ ಅಕ್ಟೋಬರ್‌ನಲ್ಲಿ ಐಒಸಿ ಸಭೆ ನಡೆಯುವ ನಿರೀಕ್ಷೆಯಿದ್ದು, ಆಗ ಈ ಪಟ್ಟಿಗೆ ಅನುಮೋದನೆ ಸಿಗಲಿದೆ.

ಐಸಿಸಿ ಚೇರ್ಮನ್‌ ಗ್ರೇಗ್ ಬಾರ್ಕ್‌ಲೆ ಮುಖ್ಯಸ್ಥರಾಗಿರುವ ಐಸಿಸಿ ಒಲಿಂಪಿಕ್ಸ್ ಕಾರ್ಯಕಾರಿ ಗುಂಪಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಸೇರ್ಪಡೆ ಮಾಡಲಾಗಿದೆ. ಇಂದ್ರಾ ನೂಯಿ (ಸ್ವತಂತ್ರ ನಿರ್ದೇಶಕಿ) ಮತ್ತು ಪರಾಗ್ ಮರಾಠೆ (ಅಮೆರಿಕ ಕ್ರಿಕೆಟ್‌ ಸಂಸ್ಥೆಯ ಮಾಜಿ ಅಧ್ಯಕ್ಷ) ಕೂಡ ಈ ಗುಂಪಿನಲ್ಲಿದ್ದಾರೆ.

ADVERTISEMENT

2036 ಒಲಿಂಪಿಕ್ಸ್‌ಗೆ ಭಾರತ ಆತಿಥ್ಯ ವಹಿಸುವ ಆಕಾಂಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಶಾ ಅವರನ್ನು ಸೇರ್ಪಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.