ADVERTISEMENT

ಐಸಿಸಿ ರ‍್ಯಾಂಕಿಂಗ್‌: ರೂಟ್‌ ಮತ್ತೆ ಅಗ್ರಸ್ಥಾನಕ್ಕೆ

ಬೌಲರ್‌ಗಳ ವಿಭಾಗದಲ್ಲಿ ಬೂಮ್ರಾ ಅಗ್ರಸ್ಥಾನ ಅಬಾಧಿತ

ಪಿಟಿಐ
Published 16 ಜುಲೈ 2025, 11:34 IST
Last Updated 16 ಜುಲೈ 2025, 11:34 IST
   

ದುಬೈ: ಇಂಗ್ಲೆಂಡ್‌ನ ಅನುಭವಿ ಬ್ಯಾಟರ್‌ ಜೋ ರೂಟ್‌ ಅವರು ಬುಧವಾರ ಪ್ರಕಟವಾದ ಐಸಿಸಿ ಪುರುಷರ ಟೆಸ್ಟ್‌ ಬ್ಯಾಟರ್‌ಗಳ ‍ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಮರಳಿ ಪಡೆದಿದ್ದಾರೆ. ಈ ಸ್ಥಾನ ಪಡೆದ ಅತಿ ಹಿರಿಯ ವಯಸ್ಸಿನ ಆಟಗಾರ ಎನಿಸಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಬೂಮ್ರಾ ಅಗ್ರಸ್ಥಾನದಲ್ಲಿ ಮುಂದುವರಿಸಿದ್ದಾರೆ.

ಟಾಪ್‌ ಟೆನ್‌ ಬೌಲರ್‌ಗಳಲ್ಲಿ ಆಸ್ಟ್ರೇಲಿಯಾದ ಐವರು ಸ್ಥಾನ ಪಡೆದಿರುವುದು ಗಮನಾರ್ಹ.

ಲಾರ್ಡ್ಸ್‌ ಟೆಸ್ಟ್‌ನಲ್ಲಿ ರೂಟ್‌ 104 ಮತ್ತು 40 ರನ್ ಗಳಿಸಿದ್ದರು. 2014ರಲ್ಲಿ ಕುಮಾರ ಸಂಗಕ್ಕರ 37ನೇ ವಯಸ್ಸಿನಲ್ಲಿ ಅಗ್ರಸ್ಥಾನಕ್ಕೇರಿದ ನಂತರ ಈ ಪಟ್ಟಪಡೆದ ಅತಿ ಹಿರಿಯ ಆಟಗಾರ ಎಂಬ ಗೌರವ 34 ವರ್ಷ ವಯಸ್ಸಿನ ರೂಟ್‌ ಅವರದಾಯಿತು.

ADVERTISEMENT

ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಹ್ಯಾರಿ ಬ್ರೂಕ್ ಮೂರನೇಸ್ಥಾನಕ್ಕೆ ಇಳಿದಿದ್ದಾರೆ. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಆಟಗಾರರ ಪೈಕಿ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್‌ ಪಂತ್ ಅವರು ಒಂದು ಸ್ಥಾನ ಕೆಳಗಿಳಿದಿದ್ದು ಕ್ರಮವಾಗಿ ಐದನೇ ಮತ್ತು ಎಂಟನೇ ಸ್ಥಾನದಲ್ಲಿದ್ದಾರೆ. ಶುಭಮನ್ ಗಿಲ್‌ ಆರರದಿಂದ ಒಂಬತ್ತನೇ ಸ್ಥಾನಕ್ಕಿಳಿದಿದ್ದಾರೆ. ಲಾರ್ಡ್ಸ್‌ ಟೆಸ್ಟ್‌ನಲ್ಲಿ ಹೋರಾಟಕಾರಿ ಅರ್ಧ ಶತಕಗಳನ್ನು ಗಳಿಸಿದ್ದ ರವೀಂದ್ರ ಜಡೇಜ ಐದು ಸ್ಥಾನ ಬಡ್ತಿ ‍ಪಡೆದು 34ನೇ ಸ್ಥಾನಕ್ಕೇರಿದ್ದಾರೆ. ಅದೇ ಪಂದ್ಯದಲ್ಲಿ ಶತಕ ಗಳಿಸಿದ್ದ  ಕೆ.ಎಲ್‌.ರಾಹುಲ್ 35ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ 42ನೇ ಸ್ಥಾನದಲ್ಲಿದ್ದಾರೆ.

ಬೂಮ್ರಾಗೆ ಅಗ್ರಸ್ಥಾನ:

ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಅವರಿಗಿಂತ 50 ರೇಟಿಂಗ್‌ ಪಾಯಿಂಟ್‌ ಮುಂದಿದ್ದು ತಮ್ಮ ಸ್ಥಾನ ಬಲಪಡಿಸಿಕೊಂಡಿದ್ದಾರೆ.

ಜಮೈಕಾ ಟೆಸ್ಟ್‌ನಲ್ಲಿ ಹ್ಯಾಟ್ರಿಕ್‌ ಸಾಧಿಸಿದ್ದ ಆಸ್ಟ್ರೇಲಿಯಾಸದ ಸ್ಕಾಟ್‌ ಬೋಲ್ಯಾಂಡ್‌ ಆರನೇ ಸ್ಥಾನದಲ್ಲಿದ್ದಾರೆ. ಪ್ಯಾಟ್‌ ಕಮಿನ್ಸ್‌ (ಮೂರನೇ), ಜೋಶ್‌ ಹ್ಯಾಜಲ್‌ವುಡ್‌ (ನಾಲ್ಕನೇ), ನೇಥನ್‌ ಲಯನ್‌ (ಎಂಟನೇ) ಮತ್ತು ಮಿಚೆಲ್‌ ಸ್ಟಾರ್ಕ್‌ (ಹತ್ತನೇ) ಕೂಡ ಅಗ್ರ 10ರಲ್ಲಿದ್ದಾರೆ. 1958ರಲ್ಲಿ ಇಂಗ್ಲೆಂಡ್‌ನ ಆರು ಮಂದಿ ಅಗ್ರ 12ರಲ್ಲಿದ್ದ ನಂತರ ಒಂದೇ ತಂಡದಿಂದ ಇಂಥ ಪ್ರಾಬಲ್ಯ ಈವರೆಗೆ ಕಂಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.