ADVERTISEMENT

ಟೀಂ ಇಂಡಿಯಾ ನಾಯಕಿ ಕೌರ್ ಜನ್ಮದಿನ: ಫೈನಲ್ ಮತ್ತು ಅ‌ಪ್ಪ–ಅಮ್ಮ

ಮಹಿಳೆಯರ ಟ್ವೆಂಟಿ- 20 ವಿಶ್ವಕಪ್

ಪಿಟಿಐ
Published 5 ಮಾರ್ಚ್ 2020, 18:52 IST
Last Updated 5 ಮಾರ್ಚ್ 2020, 18:52 IST
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಅಭಿನಂದಿಸಿದ ಇಂಗ್ಲೆಂಡ್ ತಂಡದ ಹೀತರ್ ನೈಟ್ –ಟ್ವಿಟರ್ ಚಿತ್ರ
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಅಭಿನಂದಿಸಿದ ಇಂಗ್ಲೆಂಡ್ ತಂಡದ ಹೀತರ್ ನೈಟ್ –ಟ್ವಿಟರ್ ಚಿತ್ರ   
""

ಸಿಡ್ನಿ: ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಈ ಸಲದ ಮಾರ್ಚ್ 8 ಬಹಳ ವಿಶೇಷವಾಗಲಿದೆ.

ಆ ದಿನದಂದು 31ನೇ ಜನ್ಮದಿನ ಆಚರಿಸಿಕೊಳ್ಳಲಿರುವ ಹರ್ಮನ್‌, ಮಹಿಳೆಯರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವನ್ನೂ ಮುನ್ನಡೆಸಲಿದ್ದಾರೆ. ಈ ವಿಶೇಷ ದಿನವನ್ನು ಕಣ್ತುಂಬಿಕೊಳ್ಳಲು ಹರ್ಮನ್ ಅವರ ಅಪ್ಪ–ಅಮ್ಮ ಕೂಡ ಹಾಜರಿರುವರು. ಭಾರತ ತಂಡವು ಇದೇ ಮೊದಲ ಸಲ ಫೈನಲ್ ತಲುಪಿದೆ.

ಗುರುವಾರ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ನೋಡಲು ಹರ್ಮನ್ ಅವರ ಪಾಲಕರು ಪ್ರೇಕ್ಷಕರ ಗ್ಯಾಲರಿಯಲ್ಲಿ ಹಾಜರಿದ್ದರು. ಆದರೆ, ಮಳೆಯ ಕಾರಣದಿಂದ ಪಂದ್ಯ ರದ್ದಾಯಿತು. ಆದರೆ, ಲೀಗ್ ಹಂತದಲ್ಲಿ ಅಜೇಯವಾಗುಳಿದ ಹರ್ಮನ್‌ ಬಳಗವು ಫೈನಲ್‌ ಅವಕಾಶ ಗಿಟ್ಟಿಸಿಕೊಂಡಿತು. ‘ನಾನು ಕ್ರಿಕೆಟ್ ಆಡಲು ಶುರು ಮಾಡಿದಾಗಿನಿಂದಲೂ ಅಪ್ಪ–ಅಮ್ಮ ನನ್ನ ಕ್ರಿಕೆಟ್ ನೋಡಲು ಬರಬೇಕು ಎಂಬ ಇಚ್ಛೆಯಿತ್ತು. ಅದಕ್ಕಾಗಿ ಇವತ್ತು ಅವರನ್ನು ಕರೆಸುವ ಅವಕಾಶ ಲಭಿಸಿತು. ಆದರೆ ಪಂದ್ಯ ನಡೆಯಲಿಲ್ಲ. ಫೈನಲ್‌ಗೆ ಅವರೂ ಇರುತ್ತಾರೆ. ನಾನು ಶಾಲೆಯಲ್ಲಿ ಆಡುವಾಗ ಅಪ್ಪ ನೋಡಿದ್ದರು. ಆದರೆ ಅಮ್ಮ ಒಂದು ಬಾರಿಯೂ ನೋಡಿಲ್ಲ. ನಮ್ಮ ತಂಡದ ಎಲ್ಲ ಆಟಗಾರ್ತಿಯರ ಪಾಲಕರ ಹಾರೈಕೆ ನಮ್ಮೊಂದಿಗೆ ಇದೆ. ಅಭಿಮಾನಿಗಳ ಪ್ರೋತ್ಸಾಹದಿಂದ ನಾನು ಜಯಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಈ ರೀತಿ ರದ್ದಾದರೆ, ಒಂದು ಕಾಯ್ದಿಟ್ಟ ದಿನವನ್ನು ನಿಗದಿ ಮಾಡಬೇಕು. ಅದರಿಂದ ಆಡುವ ಅವಕಾಶ ಸಿಕ್ಕಂತಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.