ಕೊಲಂಬೊ: ಮರೂಫಾ ಅಖ್ತರ್ ಅವರ ಚುರುಕಾದ ದಾಳಿಯ ಬಲದಿಂದ ಬಾಂಗ್ಲಾದೇಶ ತಂಡವು ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ಎದುರು ಭರ್ಜರಿ ಜಯ ದಾಖಲಿಸಿತು.
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಾಂಗ್ಲಾ ತಂಡವು 7 ವಿಕೆಟ್‌ಗಳಿಂದ ಜಯಿಸಿತು.
ಟಾಸ್ ಗೆದ್ದ ಪಾಕಿಸ್ತಾನ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಪಾಕ್ ತಂಡವು 38.3 ಓವರ್‌ಗಳಲ್ಲಿ 129 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಅದಕ್ಕುತ್ತರವಾಗಿ ಬಾಂಗ್ಲಾ ತಂಡವು 31.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 131 ರನ್ ಗಳಿಸಿ ಗೆದ್ದಿತು. ರುಬಿಯಾ ಹೈದರ್ (ಅಜೇಯ 54; 77ಎ, 4X8) ಅರ್ಧಶತಕ ಹೊಡೆದರು.
ಪಾಕಿಸ್ತಾನ ತಂಡಕ್ಕೆ ಮರೂಫಾ ಅಖ್ತರ್ (31ಕ್ಕೆ2) ಅವರು ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಬಲವಾದ ಪೆಟ್ಟುಕೊಟ್ಟರು. ಬಲಗೈ ಮಧ್ಯಮವೇಗಿ ಮರೂಫಾ ಇನಿಂಗ್ಸ್‌ನ ಮೊದಲ ಓವರ್‌ನ ಸತತ ಎರಡು ಎಸೆತಗಳಲ್ಲಿ ಪಾಕ್ ತಂಡದ ಒಮೈಮಾ ಸೊಹೈಲ್ ಮತ್ತು ಸಿದ್ರಾ ಅಮಿನ್ ವಿಕೆಟ್‌ಗಳನ್ನು ಉರುಳಿಸಿದರು. ಇಬ್ಬರೂ ಖಾತೆ ತೆರೆಯಲಿಲ್ಲ. ರಮೀನಾ ಶಮಿಮಾ (23; 39ಎ) ಅವರು ಪಾಕ್ ತಂಡದ ಪರ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲಿಸಿದರು.
ಇನ್ನೊಂದು ಕಡೆಯಿಂದ ನಹೀದಾ ಅಖ್ತರ್ (19ಕ್ಕೆ2) ಮತ್ತು ಶೋರ್ನಾ ಅಖ್ತರ್ (5ಕ್ಕೆ3) ಕೂಡ ಪರಿಣಾಮಕಾರಿ ದಾಳಿ ನಡೆಸಿದರು.
ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 38.3 ಓವರ್‌ಗಳಲ್ಲಿ 129 (ಮುನೀಬಾ ಅಲಿ 17, ರಮೀನ್ ಶಮೀಮ್ 23, ಫಾತೀಮಾ ಸನಾ 22, ಮರೂಫಾ ಅಕ್ತರ್ 31ಕ್ಕೆ2, ನಹೀದಾ ಅಕ್ತರ್ 19ಕ್ಕೆ2, ಶೋಮಾ ಅಕ್ತರ್ 5ಕ್ಕೆ3) ಬಾಂಗ್ಲಾದೇಶ: 31.1 ಓವರ್‌ಗಳಲ್ಲಿ 3ಕ್ಕೆ131 (ರುಬಿಯಾ ಹೈದರ್ ಔಟಾಗದೇ 54, ನಿಗಾರ್ ಸುಲ್ತಾನಾ 23, ಶೋಭನಾ ಮೊಸ್ತಾರಿ ಔಟಾಗದೇ 24, ಫಾತೀಮಾ ಸನಾ 30ಕ್ಕೆ1, ಡಯನಾ ಬೇಗ್ 14ಕ್ಕೆ1, ರಮೀನಾ ಶಮೀಮ್ 25ಕ್ಕೆ1) ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ 7 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ್ತಿ: ಮರೂಫಾ ಅಖ್ತರ್.
ಆ್ಯಷ್ಲೆ ಗಾರ್ಡನರ್ ಶತಕ: ಆಸ್ಟ್ರೇಲಿಯಾ ಶುಭಾರಂಭ
ಇಂದೋರ್ : ಆ್ಯಷ್ಲೆ ಗಾರ್ಡನರ್ ಅಮೋಘ ಶತಕದ ಬಲದಿಂದ ‘ಹಾಲಿ ಚಾಂಪಿಯನ್’ ಆಸ್ಟ್ರೇಲಿಯಾ ತಂಡವು ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಹೋಳ್ಕರ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 89 ರನ್‌ಗಳಿಂದ ಜಯಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಆರನೇ ಕ್ರಮಾಂಕದ ಬ್ಯಾಟರ್ ಗಾರ್ಡನರ್ (115; 83ಎ, 4X16, 6X1)ಶತಕದ ಬಲದಿಂದ 49.3 ಓವರ್‌ಗಳಲ್ಲಿ 326 ರನ್ ಗಳಿಸಿತು. ಕಿವೀಸ್ ತಂಡದ ಜೆಸ್ ಕೆರ್ (59ಕ್ಕೆ3) ಮತ್ತು ಲಿಯಾ ತಹುಹು (42ಕ್ಕೆ3)ಅವರ ಪರಿಣಾಮಕಾರಿ ದಾಳಿಯ ಮುಂದೆ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್‌ಗಳು ಬೇಗನೆ ಔಟಾದರು. ಆದರೆ ಗಾರ್ಡನರ್ ಮಾತ್ರ ಚೆಂದದ ಇನಿಂಗ್ಸ್ ಕಟ್ಟಿದರು.
ಗುರಿ ಬೆನ್ನಟ್ಟಿದ ಕಿವೀಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಇಬ್ಬರೂ ಆರಂಭಿಕ ಬ್ಯಾಟರ್‌ಗಳು ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಈ ಹೊತ್ತಿನಲ್ಲಿ ನಾಯಕಿ ಸೋಫಿ ಡಿವೈನ್ (112; 112ಎ, 4X12, 6X3) ಏಕಾಂಗಿ ಹೋರಾಟ ನಡೆಸಿದರು. ಆದರೆ ಕಿವೀಸ್ ಗೆಲುವಿಗೆ ಇದು ಸಾಕಾಗಲಿಲ್ಲ. ತಂಡವು 43.2 ಓವರ್‌ಗಳಲ್ಲಿ 237 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 49.3 ಓವರ್‌ಗಳಲ್ಲಿ 326 (ಫೋಬಿ ಲಿಚ್‌ಫೀಲ್ಡ್ 45, ಎಲಿಸ್ ಪೆರಿ 33, ಆ್ಯಷ್ಲೆ ಗಾರ್ಡನರ್ 115, ಕಿಮ್ ಗಾರ್ಥ್ 38, ಬ್ರೀ ಇಲಿಂಗ್ 75ಕ್ಕೆ2, ಜೆಸ್ ಕೆರ್ 59ಕ್ಕೆ3 ಅಮೆಲಿಯಾ ಕೆರ್ 54ಕ್ಕೆ2, ಲಿಯಾ ತಹುಹು 42ಕ್ಕೆ3) ನ್ಯೂಜಿಲೆಂಡ್: 43.2 ಓವರ್‌ಗಳಲ್ಲಿ 237 (ಅಮೆಲಿಯಾ ಕೆರ್ 33, ಸೋಫಿ ಡಿವೈನ್ 112, ಸೋಫಿ ಮಾಲಿನೆ 25ಕ್ಕೆ3, ಅನಾಬೆಲ್ ಸದರ್ಲೆಂಡ್ 26ಕ್ಕೆ3, ಅಲನಾ ಕಿಂಗ್ 44ಕ್ಕೆ2) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 89 ರನ್‌ಗಳ ಜಯ. ಪಂದ್ಯದ ಆಟಗಾರ್ತಿ: ಆ್ಯಷ್ಲೆ ಗಾರ್ಡನರ್.
ಇಂದಿನ ಪಂದ್ಯ
ಇಂಗ್ಲೆಂಡ್–ದಕ್ಷಿಣ ಆಫ್ರಿಕಾ
ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಸ್ಪೋರ್ಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.