
ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್
ನವೀ ಮುಂಬೈ: ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಭಾನುವಾರ ರಾತ್ರಿ ವಿಜಯದ ದೀಪ ಬೆಳಗಿದರು. ಅವರ ಆಲ್‌ರೌಂಡ್ ಆಟದ ಬಲದಿಂದ ಭಾರತ ವನಿತೆಯರ ತಂಡವು ಮೊದಲ ಸಲ ವಿಶ್ವಕಪ್ ಜಯಿಸಿತು.
ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು 52 ರನ್‌ಗಳಿಂದ ದಕ್ಷಿಣ ಆಫ್ರಿಕಾ ಎದುರು ಜಯಭೇರಿ ಬಾರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 298 ರನ್ ಗಳಿಸಿತು. ಅದಕ್ಕುತ್ತರವಾಗಿ ದಿಟ್ಟ ಹೋರಾಟ ನಡೆಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಟ್ (101ರನ್) ಅಮೋಘ ಶತಕ ಬಾರಿಸಿದರು. ಆದರೆ ಉಳಿದ ಬ್ಯಾಟರ್‌ಗಳಿಂದ ದೀರ್ಘ ಇನಿಂಗ್ಸ್ ಮೂಡಿಬರಲಿಲ್ಲ. ಅದರ ಫಲವಾಗಿ ಮೊದಲ ವಿಶ್ವಕಪ್ ಜಯದ ಸಂಭ್ರಮ ದಕ್ಷಿಣ ಆಫ್ರಿಕಾದ ಕೈತಪ್ಪಿತು. 45.3 ಓವರ್‌ಗಳಲ್ಲಿ 246 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.
ಡಿವೈ ಪಾಟೀಲ ಕ್ರೀಡಾಂಗಣ ದಲ್ಲಿ ಭಾನುವಾರ ಮಧ್ಯಾಹ್ನ ಮಳೆ ಸುರಿದಿದ್ದರಿಂದ ಎರಡು ತಾಸು ತಡವಾಗಿ ಪಂದ್ಯ ಆರಂಭವಾಯಿತು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಆತಿಥೇಯ ತಂಡದ ಆರಂಭಿಕ ಜೋಡಿ ಸ್ಮೃತಿ ಮಂದಾನ (45; 58ಎ, 4X8) ಮತ್ತು ಶಫಾಲಿ ವರ್ಮಾ (87; 78ಎ, 4X7, 6X2) ಮೊದಲ ವಿಕೆಟ್ ಜೊತೆಯಾಟದಲ್ಲಿ 104 ರನ್ ಸೇರಿಸಿದರು. ಅರ್ಧಶತಕದತ್ತ ಹೆಜ್ಜೆಯಿಟ್ಟಿದ್ದ ಸ್ಮೃತಿ ಅವರು ಕ್ಲೊಯೆ ಟ್ರಯನ್ ಅವರು ಹಾಕಿದ 18ನೇ ಓವರ್‌ನಲ್ಲಿ ವಿಕೆಟ್‌ಕೀಪರ್ ಜಾಫ್ತಾಗೆ ಕ್ಯಾಚ್ ಕೊಟ್ಟರು.
ಪ್ರತಿಕಾ ರಾವಲ್ ಅವರು ಗಾಯಗೊಂಡಿದ್ದರಿಂದ ತಂಡದಲ್ಲಿ ಸ್ಥಾನ ಪಡೆದಿರುವ ಶಫಾಲಿ ಈ ಟೂರ್ನಿಯಲ್ಲಿ ಆಡಿದ ಎರಡನೇ ಪಂದ್ಯವಿದು. ಸೆಮಿಫೈನಲ್‌ನಲ್ಲಿ ಮಿಂಚಿರಲಿಲ್ಲ. ಆದರೆ ಶಫಾಲಿ ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಮೆರೆದರು. ದಕ್ಷಿಣ ಆಫ್ರಿಕಾ ಬೌಲರ್‌ಗಳ ಶಿಸ್ತಿನ ದಾಳಿಗೆ ದಿಟ್ಟ ಉತ್ತರ ಕೊಟ್ಟರು. ಆದರೆ ಶತಕದ ಸಮೀಪದದಲ್ಲಿದ್ದಾಗ ಅಯಬೊಂಗಾ ಕಾಕಾ ಬೌಲಿಂಗ್‌ನಲ್ಲಿ ಔಟಾದರು. ಸೆಮಿಫೈನಲ್ ಪಂದ್ಯದ ಗೆಲುವಿನ ರೂವಾರಿಯಾಗಿದ್ದ ಜಿಮಿಮಾ ರಾಡ್ರಿಗಸ್ (24 ರನ್) ಅವರೊಂದಿಗೆ ಶಫಾಲಿ 62 ರನ್ ಸೇರಿಸಿದರು. ಜಿಮಿಮಾ ಅವರ ಆಟಕ್ಕೂ ಅಯಬೋಂಗಾ ತಡೆಯೊಡ್ಡಿದರು.
ನಾಯಕಿ ಹರ್ಮನ್‌ಪ್ರೀತ್ ಕೌರ್ (20 ರನ್) ಅವರನ್ನು ನಿಯಂತ್ರಿಸುವಲ್ಲಿ ಮ್ಲಾಬಾ ಯಶಸ್ವಿಯಾದರು. ಒಂದು ಕಡೆ ವಿಕೆಟ್ ಪತನವಾಗುತ್ತಿದ್ದರೂ ದೀಪ್ತಿ ಶರ್ಮಾ ಗಟ್ಟಿಯಾಗಿ ನಿಂತರು. 100ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ರಿಚಾ ಘೋಷ್ (34; 24ಎ) ಕೂಡ ಬೀಸಾಟವಾಡಿದರು. ರಿಚಾ ಅವರ ವಿಕೆಟ್ ಕೂಡ ಅಯಬೋಂಗಾ ಪಾಲಾಯಿತು. ದೀಪ್ತಿ ಕೊನೆಯ ಓವರ್‌ನಲ್ಲಿ ರನ್‌ಔಟ್ ಆದರು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ಉತ್ತಮ ಆರಂಭವನ್ನೇ ಮಾಡಿತು. ಲಾರಾ ವೋಲ್ವಾರ್ಟ್ ಮತ್ತು ತಾಜ್ಮೀನ್ ಬ್ರಿಟ್ಸ್ ಮೊದಲ ವಿಕೆಟ್‌ಗೆ 51 ರನ್ ಸೇರಿಸಿದರು. 10ನೇ ಓವರ್‌ನಲ್ಲಿ ಬ್ರಿಟ್ಸ್ ರನೌಟ್ ಆಗುವುದರೊಂದಿಗೆ ಭಾರತಕ್ಕೆ ಮೊದಲ ಯಶಸ್ಸು ದೊರೆಯಿತು. ಆದರೆ ಲಾರಾ ಒಂದು ಕಡೆ ಬೀಸಾಟವಾಡುತ್ತಿದ್ದರು. ಇದನ್ನು ಮನಗಂಡ ಭಾರತದ ಬೌಲರ್‌ಗಳು ಇನ್ನೊಂದು ಬದಿಯಲ್ಲಿ ಬ್ಯಾಟರ್‌ಗಳೂ ಕಾಲೂರಲು ಬಿಡಲಿಲ್ಲ. ಚಾಣಾಕ್ಷತೆ ಮೆರೆದರು. ಕೆಲವು ಬಾರಿ ಮಿಸ್‌ಫೀಲ್ಡ್ ಮತ್ತು ಕ್ಯಾಚ್‌ಗಳನ್ನು ಕೈಚೆಲ್ಲಿದರೂ ಭಾರತದ ಆಟಗಾರ್ತಿಯರು ಧೈರ್ಯ ಕಳೆದುಕೊಳ್ಳಲಿಲ್ಲ. ಮರಳಿ, ಮರಳಿ ಯತ್ನವ ಮಾಡಿದರು. ಅದಕ್ಕೆ ತಕ್ಕಂತೆ ಮೋಡಿ ಮಾಡಿದ ದೀಪ್ತಿ ಐದು ವಿಕೆಟ್ ಗೊಂಚಲು ಗಳಿಸಿದರು. ಶಫಾಲಿ ಕೂಡ ಎರಡು ವಿಕೆಟ್ ಪಡೆದರು.
46ನೇ ಓವರ್‌ನಲ್ಲಿ ದೀಪ್ತಿ ಎಸೆತವನ್ನು ಎತ್ತಿ ಹೊಡೆದ ನದೀನ್ ಡಿ ಕ್ಲರ್ಕ್ ಅವರ ಕ್ಯಾಚ್ ಅನ್ನು ಸ್ವಲ್ಪ ದೂರದವರೆಗೂ ಓಡಿ ಹೋಗಿ ಕೈತುಂಬಿಕೊಂಡ ನಾಯಕಿ ಹರ್ಮನ್ ಸಂಭ್ರಮದಿಂದ ಕುಣಿದಾಡಿದರು. ಮರುಕ್ಷಣವೇ ಸಹ ಆಟಗಾರ್ತಿಯರು ತಮ್ಮ ನಾಯಕಿಯನ್ನು ಬಿಗಿದಪ್ಪಿ ಸಂಭ್ರಮಿಸಿದರು. ಎಲ್ಲರ ಕಂಗಳಲ್ಲಿಯೂ ಆನಂದ ಭಾಷ್ಪ ಜಿನುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.