ADVERTISEMENT

ICC Womens World Cup: ಪಾಕ್ ಎದುರು ಗೆದ್ದರೂ ನ್ಯೂಜಿಲೆಂಡ್ ಮುಂದಿನ ಹಾದಿ ಕಠಿಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2022, 6:46 IST
Last Updated 26 ಮಾರ್ಚ್ 2022, 6:46 IST
ನ್ಯೂಜಿಲೆಂಡ್ ಆಟಗಾರ್ತಿಯರ ಸಂಭ್ರಮ (ಐಸಿಸಿ ಟ್ವಿಟರ್‌ ಖಾತೆಯಿಂದ)
ನ್ಯೂಜಿಲೆಂಡ್ ಆಟಗಾರ್ತಿಯರ ಸಂಭ್ರಮ (ಐಸಿಸಿ ಟ್ವಿಟರ್‌ ಖಾತೆಯಿಂದ)   

ಕ್ರೈಸ್ಟ್‌ಚರ್ಚ್: ಇಲ್ಲಿನ ಹಗ್ಲೀ ಓವಲ್‌ ಕ್ರೀಡಾಂಗಣದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ನಡೆದ ಮಹಿಳಾ ಏಕದಿನಕ್ರಿಕೆಟ್‌ ವಿಶ್ವಕಪ್‌ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿತಾದರೂ, ಸೆಮಿಫೈನಲ್‌ ತಲುಪಲು ಕಠಿಣವಾಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌, ಆರಂಭಿಕ ಬ್ಯಾಟರ್ ಸೂಝಿ ಬೆಟ್ಸ್‌(126) ಸಿಡಿಸಿದ ಅಮೋಘ ಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 265 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಪಾಕಿಸ್ತಾನ 194 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ ನಿದಾ ದರ್ (50) ಮತ್ತು ನಾಯಕಿ ಬಿಷ್ಮಾ ಮಹರೂಫ್‌ (38) ಹೊರತುಪಡಿಸಿ ಉಳಿದವರ ಬ್ಯಾಟ್‌ಗಳಿಂದ ಉತ್ತಮ ರನ್‌ ಕಾಣಿಕೆ ಬರಲಿಲ್ಲ.

ಹೀಗಾಗಿ 71 ರನ್ ಅಂತರದಿಂದ ಸೋಲೊಪ್ಪಿಕೊಳ್ಳಬೇಕಾಯಿತು.

ADVERTISEMENT

ಸೆಮಿಫೈನಲ್ ತಲುಪಲು ವಿಫಲ
ನ್ಯೂಜಿಲೆಂಡ್‌ ತಂಡ ಈ ಪಂದ್ಯದಲ್ಲಿ ಗೆದ್ದಿದೆಯಾದರೂ, ಸೆಮಿಫೈನಲ್ ತಲುಪಲು ಪವಾಡ ನಡೆಯಬೇಕಿದೆ.

ಗುಂಪು ಹಂತದಲ್ಲಿ ಆಡಿರುವ ಏಳೂ ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ 14 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆರು ಪಂದ್ಯಗಳಿಂದ 4 ಜಯ ಮತ್ತು ರದ್ದಾದ ಒಂದು ಪಂದ್ಯದಲ್ಲಿ ಸಿಕ್ಕ 1 ಅಂಕ ಸೇರಿ ಒಟ್ಟು 9 ಪಾಯಿಂಟ್‌ ಹೊಂದಿರುವ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ.

ಏಳು ಪಂದ್ಯಗಳಿಂದ 7 ಅಂಕ ಕಲೆಹಾಕಿರುವ ವೆಸ್ಟ್‌ ಇಂಡೀಸ್‌ ಮೂರನೇ ಸ್ಥಾನದಲ್ಲಿದೆಯಾದರೂ, ಸೆಮಿ ಪ್ರವೇಶ ಇನ್ನೂ ಖಚಿತವಾಗಿಲ್ಲ. ತಲಾ ಆರು ಪಂದ್ಯಗಳನ್ನು ಆಡಿ (ಮೂರು ಜಯ, ಮೂರು ಸೋಲಿನೊಂದಿಗೆ) ಆರು ಅಂಕಗಳನ್ನು ಹೊಂದಿರುವ ಇಂಗ್ಲೆಂಡ್‌ ಮತ್ತು ಭಾರತ ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನಗಳಲ್ಲಿವೆ.

ಈ ಎರಡರಲ್ಲಿಯಾವುದೇ ಒಂದು ತಂಡ ತಮ್ಮ ಮುಂದಿನ ಪಂದ್ಯದಲ್ಲಿ ಸೋತರೆ, ವಿಂಡೀಸ್‌ಗೆ ಸೆಮಿಫೈನಲ್‌ ತಲುಪುವ ಅವಕಾಶ ಸಿಗಲಿದೆ. ಒಂದು ವೇಳೆ ಎರಡೂ ತಂಡಗಳು ಗೆದ್ದರೆ ವಿಂಡೀಸ್‌ಗೆ ಸೆಮಿಫೈನಲ್‌ ಬಾಗಿಲು ಮುಚ್ಚಲಿದೆ.

ಟೂರ್ನಿಯಲ್ಲಿ ಎಲ್ಲ (7) ಪಂದ್ಯಗಳನ್ನು ಆಡಿ 6 ಅಂಕ ಪಡೆದಿರುವನ್ಯೂಜಿಲೆಂಡ್‌, ರನ್‌ ರೇಟ್ ಆಧಾರದಲ್ಲಿ ಸದ್ಯ 6ನೇ ಸ್ಥಾನದಲ್ಲಿದೆ. ಹೀಗಾಗಿಇಂಗ್ಲೆಂಡ್‌ ಮತ್ತು ಭಾರತ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಭಾರಿ ಅಂತರದಿಂದ ಸೋತರಷ್ಟೇ, ನ್ಯೂಜಿಲೆಂಡ್‌ರನ್‌ ರೇಟ್ ಆಧಾರದಲ್ಲಿ ನಾಲ್ಕರ ಹಂತಕ್ಕೇರಲು ಸಾಧ್ಯ. ಇದು ಸುಲಭದ ಮಾತಲ್ಲ. ಹಾಗಾಗಿ ಈ ತಂಡ ಬಹುತೇಕ ಹೊರಬಿದ್ದ ಸ್ಥಿತಿಯಲ್ಲಿದೆ.

ತಲಾ ಎರಡು ಅಂಕ ಹೊಂದಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.