ADVERTISEMENT

ಟಿ20 ವಿಶ್ವಕಪ್: ವಿರಾಟ್–ರೋಹಿತ್ ಇನಿಂಗ್ಸ್ ಆರಂಭಿಸಲಿ- ಇರ್ಫಾನ್ ಪಠಾಣ್

ಕ್ರಿಕೆಟ್ ವೀಕ್ಷಕ ವಿವರಣೆಗಾರ ಇರ್ಫಾನ್ ಪಠಾಣ್ ಅಭಿಪ್ರಾಯ

ಪಿಟಿಐ
Published 26 ಏಪ್ರಿಲ್ 2024, 15:59 IST
Last Updated 26 ಏಪ್ರಿಲ್ 2024, 15:59 IST
ಇರ್ಫಾನ್ ಪಠಾಣ್ 
ಇರ್ಫಾನ್ ಪಠಾಣ್    

ನವದೆಹಲಿ:  ಮುಂಬರಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಇನಿಂಗ್ಸ್ ಆರಂಭಿಸಿದರೆ, ರಿಂಕು ಶರ್ಮಾ ಮತ್ತು ಶಿವಂ ದುಬೆ ಅವರಂತಹ ಫಿನಿಷರ್‌ಗಳಿಗೆ ಸ್ಥಾನ ಸಿಗಬಹುದು ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ಇರ್ಫಾನ್ ಪಠಾಣ್ ಹೇಳಿದರು. 

2007ರಲ್ಲಿ ಟಿ20 ವಿಶ್ವಕಪ್ ಜಯಿಸಿದ್ದ ಭಾರತ ತಂಡದಲ್ಲಿ ಆಡಿದ್ದ ಇರ್ಫಾನ್‌ ಶುಕ್ರವಾರ ಸ್ಟಾರ್‌ ಸ್ಪೋರ್ಟ್ಸ್ ವಾಹಿನಿ ಆಯೋಜಿಸಿದ್ದ ‘ಟಿಕೆಟ್ ಟು ವರ್ಲ್ಡ್‌ ಕಪ್’ ಪ್ರಸ್‌ ರೂಮ್  ಶೋನಲ್ಲಿ ಅವರು ಮಾತನಾಡಿದರು. 

‘ಒಂದೊಮ್ಮೆ ವಿರಾಟ್ ಇನಿಂಗ್ಸ್‌ ಆರಂಭಿಸಿದರೆ, 11 ಆಟಗಾರರ ಆಯ್ಕೆಯ ಮೇಲೆ ಪರಿಣಾಮ ಬೀರಲಿದೆ. ಆಗ ಶಿವಂ ದುಬೆ ಆಡುವ ಅವಕಾಶ ಹೆಚ್ಚಾಗಲಿದೆ. ಅಲ್ಲದೇ ರಿಂಕು ಸಿಂಗ್ ಅವರನ್ನೂ ಆಯ್ಕೆ ಮಾಡಿಕೊಳ್ಳಬಹುದು.  ಅಲ್ಲದೇ ಐವರು ಪರಿಣತ ಬೌಲರ್‌ಗಳಿಗೂ ಅವಕಾಶ ಸಿಗಬಹುದು. ಆದರೆ ವಿರಾಟ್ ಮೂರನೇ ಕ್ರಮಾಂಕದಲ್ಲಿ ಆಡಿದರೆ ಇಂತಹ ತಂಡ ಸಂಯೋಜನೆ ಸಾಧ್ಯವಾಗುವುದಿಲ್ಲ’ ಎಂದು ಇರ್ಫಾನ್ ಅಭಿಪ್ರಾಯಪಟ್ಟರು. 

ADVERTISEMENT

‘ಒಂದೊಮ್ಮೆ ಯಶಸ್ವಿ ಜೈಸ್ವಾಲ್ ಅವರು ಸ್ಥಾನ ಗಳಿಸಿದರೆ, ಸಾಂದರ್ಭಿಕ ಬೌಲರ್‌ ಆಗಿಯೂ ಆಡಬಲ್ಲರು. ಅವರು ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಆದ್ದರಿಂದ ಅಗ್ರ ಮೂವರು ಬ್ಯಾಟರ್‌ಗಳಲ್ಲಿ ರೋಹಿತ್, ವಿರಾಟ್ ಹಾಗೂ ಜೈಸ್ವಾಲ್ ಅವರು ಇರಬೇಕು’ ಎಂದೂ ಇರ್ಫಾನ್ ಹೇಳಿದರು. 

ಸಂವಾದದಲ್ಲಿ ಹಾಜರಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್, ‘ಪವರ್‌ ಪ್ಲೇ ಅವಧಿಯಲ್ಲಿ ವಿರಾಟ್ ಹೆಚ್ಚು ಎಸೆತಗಳನ್ನು ಆಡಬೇಕು. ಇದರಿಂದ ಉತ್ತಮ ಆರಂಭ ದೊರೆತರೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗುತ್ತದೆ. ಆದರೆ ಮೊದಲ ಆರು ಓವರ್‌ಗಳಲ್ಲಿ ಯಶಸ್ವಿ ಜೈಸ್ವಾಲ್ ಹೆಚ್ಚು ಪರಿಣಾಮಕಾರಿಯಾಗಬಲ್ಲರು. ಎಡಗೈ ಬ್ಯಾಟರ್‌ ಜೈಸ್ವಾಲ್  ಅವರೊಂದಿಗೆ ಬಲಗೈ ಬ್ಯಾಟರ್ ಇದ್ದರೆ ಹೆಚ್ಚು ಉಪಯುಕ್ತ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.