ADVERTISEMENT

ಪಂತ್ ಬೆನ್ನಲ್ಲೇ ಜಡೇಜಗೆ ಗಾಯ; ಸ್ಕ್ಯಾನಿಂಗ್‌ಗಾಗಿ ರವಾನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2021, 6:50 IST
Last Updated 9 ಜನವರಿ 2021, 6:50 IST
ರವೀಂದ್ರ ಜಡೇಜ ಗಾಯವನ್ನು ಪರಿಶೀಲಿಸುತ್ತಿರುವ ಫಿಸಿಯೋ
ರವೀಂದ್ರ ಜಡೇಜ ಗಾಯವನ್ನು ಪರಿಶೀಲಿಸುತ್ತಿರುವ ಫಿಸಿಯೋ   

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಮಹತ್ವದ ಟೆಸ್ಟ್ ಸರಣಿಯಲ್ಲಿ ಭಾರತೀಯ ಆಟಗಾರರ ಸತತ ಗಾಯದ ಸಮಸ್ಯೆ ಸದ್ಯಕ್ಕೆ ಬಗೆ ಹರಿಯುವ ಯಾವುದೇ ಲಕ್ಷ್ಮಣಗಳು ಕಾಣಿಸುತ್ತಿಲ್ಲ.ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ತೃತೀಯ ದಿನದಾಟದಲ್ಲಿ ಭಾರತ ತಂಡದ ಇಬ್ಬರು ಆಟಗಾರರು ಬೆನ್ನು ಬೆನ್ನಿಗೆ ಗಾಯದ ಸಮಸ್ಯೆಗೆ ತುತ್ತಾದರು.

ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜ ಬ್ಯಾಟಿಂಗ್ ಮಾಡುತ್ತಿರುವವೇಳೆಯಲ್ಲಿ ಗಾಯ ಮಾಡಿಕೊಂಡಿದ್ದಾರೆ. ಪಂತ್ ಎಡ ಮೊಣಗೈಗೆ ಗಾಯ ಮಾಡಿಕೊಂಡಿದ್ದರೆ ರವೀಂದ್ರ ಜಡೇಜ ಅವರ ಎಡಗೈಯ ಹೆಬ್ಬರಳಿಗೆ ಪೆಟ್ಟು ಬಿದ್ದಿದೆ. ಇವರಿಬ್ಬರನ್ನು ಸ್ಕ್ಯಾನಿಂಗ್‌ಗಾಗಿಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ಸರಣಿ ಆರಂಭಕ್ಕೂ ಮೊದಲೇ ಸತತ ಗಾಯದ ಸಮಸ್ಯೆ ಅನುಭವಿಸುತ್ತಿರುವ ಟೀಮ್ ಇಂಡಿಯಾಗೆ ಪಂತ್ ಹಾಗೂ ಜಡೇಜ ಗಾಯದ ಸಮಸ್ಯೆಗೆ ಒಳಗಾಗಿರುವುದು ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ. ಅಲ್ಲದೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಲಭ್ಯವಾಗುವರೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ADVERTISEMENT

ಪಂತ್ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕಾಣಿಸಿಕೊಂಡಿರುವ ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸುತ್ತಿದ್ದಾರೆ. ಅತ್ತ ರವೀಂದ್ರ ಜಡೇಜ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಕಣಕ್ಕಿಳಿದಿಲ್ಲ.

ಮಿಚೆಲ್ ಸ್ಟಾರ್ಕ್ ದಾಳಿಯಲ್ಲಿ ಎಡಗೈಯ ಹೆಬ್ಬೆರಳಿಗೆ ಜಡೇಜ ಗಾಯ ಮಾಡಿಕೊಂಡಿದ್ದರು. ಪಂತ್ 36 ರನ್ ಗಳಿಸಿದ್ದರೆ ಜಡೇಜ 28 ರನ್ ಗಳಿಸಿ ಅಜೇಯರಾಗುಳಿದರು.

ಗಾಯದ ಹಿನ್ನೆಲೆಯಲ್ಲಿ ಇಶಾಂತ್ ಶರ್ಮಾ ಆಸೀಸ್ ಪ್ರಯಾಣವನ್ನೇ ಬೆಳೆಸಿರಲಿಲ್ಲ. ಬಳಿಕ ಮೊದಲ ಪಂದ್ಯದಲ್ಲಿ ಮೊಹಮ್ಮದ್ ಶಮಿ ಹಾಗೂ ದ್ವಿತೀಯ ಪಂದ್ಯದಲ್ಲಿ ಉಮೇಶ್ ಯಾದವ್ ಗಾಯ ಮಾಡಿಕೊಂಡು ಸರಣಿಯ ಉಳಿದಿರುವ ಪಂದ್ಯಗಳಿಗೆ ಅಲಭ್ಯವಾಗಿದ್ದರು.

ಈ ಮಧ್ಯೆ ಗಾಯಾಳು ಕೆಎಲ್ ರಾಹುಲ್ ಸಹ ತವರಿಗೆ ವಾಪಸ್ ಆಗಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ್ದ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಹಿನ್ನೆಲೆಯಲ್ಲಿ ತವರಿಗೆ ಮರಳಿದ್ದರಿಂದ, ನಾಯಕನ ಸೇವೆಯಿಂದಲೂ ವಂಚಿತವಾಗಿದೆ.

ಅತ್ತ ಗಾಯದಿಂದಾಗಿ ಮೊದಲೆರಡು ಪಂದ್ಯಗಳಿಗೆಅಲಭ್ಯರಾಗಿದ್ದ ರೋಹಿತ್ ಶರ್ಮಾ ಅಂತಿಮ ಎರಡು ಪಂದ್ಯಗಳಿಗಾಗಿ ತಂಡವನ್ನು ಸೇರಿದ್ದರು.

ಏತನ್ಮಧ್ಯೆ ಪ್ರಮುಖ ವೇಗಿಗಳ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ನವದೀಪ್ ಸೈನಿ ಅನುಕ್ರಮವಾಗಿ ಎರಡನೇ ಹಾಗೂ ಮೂರನೇ ಟೆಸ್ಟ್ ಪಂದ್ಯಗಳಲ್ಲಿ ಪದಾರ್ಪಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.