ADVERTISEMENT

ಗಾಯಾಳು ಪ್ಯಾಟಿನ್ಸನ್ ಔಟ್; ಸಿಡ್ನಿಯಲ್ಲಿ ಶೇ.25ರಷ್ಟು ಸೀಟು ಭರ್ತಿ

ಏಜೆನ್ಸೀಸ್
Published 4 ಜನವರಿ 2021, 4:28 IST
Last Updated 4 ಜನವರಿ 2021, 4:28 IST
ಆಸ್ಟ್ರೇಲಿಯಾ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್
ಆಸ್ಟ್ರೇಲಿಯಾ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್   

ಸಿಡ್ನಿ: ಗಾಯದ ಸಮಸ್ಯೆಗೆ ತುತ್ತಾಗಿರುವ ಆಸ್ಟ್ರೇಲಿಯಾ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್, ಪ್ರವಾಸಿ ಭಾರತ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ.

ಈ ಮಧ್ಯೆ ಕಟ್ಟುನಿಟ್ಟಿನ ಕೋವಿಡ್-19 ಮಾನದಂಡಗಳನ್ನು ಪಾಲಿಸುತ್ತಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದ ಪ್ರಾರಂಭದಲ್ಲಿ ಶೇಕಡಾ 25ರಷ್ಟು ಪ್ರೇಕ್ಷಕರಿಗೆ ಮಾತ್ರ ಗ್ಯಾಲರಿಯಿಂದ ಪಂದ್ಯ ನೋಡಲು ಅವಕಾಶ ಮಾಡಿಕೊಡುವ ನಿರ್ಧಾರಕ್ಕೆ ಬಂದಿದೆ.

ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವು ಜನವರಿ 7ರಂದು ಆರಂಭವಾಗಲಿದೆ. ಈ ಮಧ್ಯೆ ಮನೆಯಲ್ಲಿ ಆಯತಪ್ಪಿ ಬಿದ್ದಿರುವ ಪ್ಯಾಟಿನ್ಸನ್ ಪಕ್ಕೆಲುಬುಗೆ ಗಾಯವಾಗಿರುವ ಪರಿಣಾಮ ಮೂರನೇ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ.

ADVERTISEMENT

ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಅವರಂತಹ ಪರಿಣಾಮಕಾರಿ ವೇಗದ ಪಡೆಯನ್ನು ಹೊಂದಿರುವ ಆಸೀಸ್ ತಂಡದಲ್ಲಿ ಜೇಮ್ಸ್ ಪ್ಯಾಟಿನ್ಸನ್ ಬೆಂಚ್ ಕಾಯಬೇಕಾಗಿತ್ತು. ಅಲ್ಲದೆ ಪ್ಯಾಟಿನ್ಸನ್ ಸ್ಥಾನಕ್ಕೆ ಬದಲಿ ಆಟಗಾರನನ್ನು ಘೋಷಿಸಲಾಗಿಲ್ಲ.

ಅತ್ತ ನ್ಯೂ ಸೌತ್ ವೇಲ್ಸ್ ಗವರ್ನಮೆಂಟ್ ಸಲಹೆಯಂತೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.ಪ್ರಾರಂಭದಲ್ಲಿ ಶೇಕಡಾ 25ರಷ್ಟು ಪ್ರೇಕ್ಷಕರನ್ನು ಮಾತ್ರ ತುಂಬಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ.

ಅಂದರೆ 38,000 ಆಸನ ಸಾಮರ್ಥ್ಯವನ್ನು ಹೊಂದಿರುವ ಸಿಡ್ನಿ ಸ್ಟೇಡಿಯಂನಲ್ಲಿ 9,500 ಅಭಿಮಾನಿಗಳಿಗೆ ಮಾತ್ರ ಕುಳಿತುಕೊಳ್ಳುವ ಅವಕಾಶವಿರುತ್ತದೆ. ಹಾಗಾಗಿ ಮುಂಗಡವಾಗಿ ಕಾಯ್ದಿರಿಸಿದ ಹೆಚ್ಚುವರಿ ಟಿಕೆಟ್‌ಗಳ ಮೊತ್ತವನ್ನು ಹಿಂತಿರುಗಿಸಲಾಗುವುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.