ಕ್ಯಾನ್‌ಬೆರಾದ ಮನುಕಾ ಓವಲ್ ಕ್ರೀಡಾಂಗಣ
ಚಿತ್ರಕೃಪೆ: X/@BCCI
ಕ್ಯಾನ್‌ಬೆರಾ: ಬಿರುಸಿನ ಮಳೆಯ ಕಾರಣ ಭಾರತ ಮತ್ತು ಆಸ್ಟ್ರೇಲಿಯಾ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ನಡುವಣ ಎರಡು ದಿನಗಳ ಪಿಂಕ್‌ಬಾಲ್ ಅಭ್ಯಾಸ ಪಂದ್ಯದ ಮೊದಲ ದಿನದಾಟ ಸಾಧ್ಯವಾಗಲಿಲ್ಲ. ಹೀಗಾಗಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರಿಗೆ ಅಗತ್ಯವಾಗಿದ್ದ ಅಭ್ಯಾಸ ತಪ್ಪಿಹೋಯಿತು.
ಇವರಿಬ್ಬರು ಮೊದಲ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಹೀಗಾಗಿ, ಮುಂದಿನ ಶುಕ್ರವಾರ (ಡಿ.6) ಆಡಿಲೇಡ್‌ನಲ್ಲಿ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯಕ್ಕೆ ಮೊದಲು, ಈ ಪಂದ್ಯದ ಮೂಲಕ ಅಭ್ಯಾಸ ನಡೆಸಲು ಅವರು ತವಕಗೊಂಡಿದ್ದರು.
ಹವಾಮಾನ ಅವಕಾಶ ನೀಡಿದಲ್ಲಿ ತಲಾ 50 ಓವರುಗಳ ಪಂದ್ಯವನ್ನು ಆಡಲು ಉಭಯ ತಂಡಗಳು ಒಪ್ಪಿಕೊಂಡಿವೆ.
ಎರಡನೇ ಮಗುವಿಗೆ ತಂದೆಯಾದ ಸಂಭ್ರಮದಲ್ಲಿದ್ದ ರೋಹಿತ್, ತವರಿನಲ್ಲೇ ಉಳಿದಿದ್ದ ಕಾರಣ ಮೊದಲ ಟೆಸ್ಟ್ ಆಡಿರಲಿಲ್ಲ.
ಭಾರತ ಕೊನೆಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು 2022ರ ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ಆಡಿತ್ತು. ಹೀಗಾಗಿ ಅವರು ಇಲ್ಲಿನ ಅಭ್ಯಾಸ ಪಂದ್ಯ ಆಡಲು ಸಜ್ಜಾಗಿದ್ದರು. ಗಿಲ್ ಹೆಬ್ಬೆರಳಿನ ಗಾಯದಿಂದ ಟೆಸ್ಟ್ ಆಡಿರಲಿಲ್ಲ. ಚೇತರಿಸಿಕೊಂಡಿರುವ ಅವರು ಎರಡನೇ ಟೆಸ್ಟ್‌ನಲ್ಲಿ ಆಡುವುದು ಖಚಿತವಾಗಿದೆ.
ದೇವದತ್ತ ಪಡಿಕ್ಕಲ್ ಮತ್ತು ಧ್ರುವ್ ಜುರೇಲ್ ಅವರ ಬದಲು ಎರಡನೇ ಟೆಸ್ಟ್‌ಗೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆಡುವ ನಿರೀಕ್ಷೆಯಿದೆ.
ಅಭ್ಯಾಸ ಪಂದ್ಯದ ಎರಡನೇ ದಿನವಾದ ಭಾನುವಾರ 50 ಓವರುಗಳ ಪಂದ್ಯ ಸಾಧ್ಯವಾಗಿ ಸ್ವಲ್ಪವಾದರೂ ಅಭ್ಯಾಸ ನಡೆಸುವ ವಿಶ್ವಾಸದಲ್ಲಿ ಪ್ರವಾಸಿ ತಂಡವಿದೆ.
ಭಾರತ ಇದುವರೆಗೆ ನಾಲ್ಕು ಪಿಂಕ್‌ಬಾಲ್ ಟೆಸ್ಟ್‌ಗಳನ್ನು ಆಡಿದೆ. 2019ರಲ್ಲಿ ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತದಲ್ಲಿ ಮೊದಲ ಬಾರಿ ಆಡಿ ಜಯಗಳಿಸಿತ್ತು. 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿಲೇಡ್‌ನಲ್ಲಿ ಸೋತಿತ್ತು. 2021ರಲ್ಲಿ ಅಹಮದಾಬಾದಿನಲ್ಲಿ ಇಂಗ್ಲೆಂಡ್ ವಿರುದ್ಧ, 2022ರಲ್ಲಿ ಶ್ರೀಲಂಕಾ ವಿರುದ್ಧ ಜಯಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.