ADVERTISEMENT

36ರಿಂದ 78ರ ವರೆಗೆ: ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಕನಿಷ್ಠ ಮೊತ್ತಗಳು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಆಗಸ್ಟ್ 2021, 16:44 IST
Last Updated 25 ಆಗಸ್ಟ್ 2021, 16:44 IST
ಔಟ್ ಆದ ಬಳಿಕ ಪೆವಿಲಿನತ್ತ ಹೆಜ್ಜೆ ಹಾಕುತ್ತಿರುವ ರವೀಂದ್ರ ಜಡೇಜ
ಔಟ್ ಆದ ಬಳಿಕ ಪೆವಿಲಿನತ್ತ ಹೆಜ್ಜೆ ಹಾಕುತ್ತಿರುವ ರವೀಂದ್ರ ಜಡೇಜ   

ಲೀಡ್ಸ್‌: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಕೇವಲ 78 ರನ್ನಿಗೆ ಆಲೌಟ್ ಆಗಿರುವ ಟೀಮ್ ಇಂಡಿಯಾ ಮುಖಭಂಗಕ್ಕೊಳಗಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದಿಂದ ದಾಖಲಾದ ಒಂಬತ್ತನೇ ಅತಿ ಕನಿಷ್ಠ ಮೊತ್ತ ಇದಾಗಿದೆ. ಕಳೆದ ವರ್ಷ (2020 ಡಿಸೆಂಬರ್) ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೇವಲ 36 ರನ್ನಿಗೆ ಆಲೌಟ್ ಆಗಿರುವುದು ಇದುವರೆಗಿನ ಅತ್ಯಂತ ಕಳಪೆ ಸಾಧನೆಯಾಗಿದೆ.

ಪ್ರಥಮ ಇನ್ನಿಂಗ್ಸ್‌ನಲ್ಲಿ ಮೂರನೇ ಅತಿ ಕನಿಷ್ಠ ಮೊತ್ತ...
ಇದು ಟೆಸ್ಟ್‌ ಕ್ರಿಕೆಟ್‌ನ ಪ್ರಥಮ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದಿಂದ ದಾಖಲಾದ ಮೂರನೇ ಅತಿ ಕನಿಷ್ಠ ಮೊತ್ತವಾಗಿದೆ. ಈ ಹಿಂದೆ 1987ರ ಡೆಲ್ಲಿ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 75 ಹಾಗೂ 2008ರ ಅಹಮದಾಬಾದ್‌ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ನಿಗೆ ಆಲೌಟ್ ಆಗಿತ್ತು.

ADVERTISEMENT

ಇಂಗ್ಲೆಂಡ್ ವಿರುದ್ಧ ಮೂರನೇ ಅತಿ ಕನಿಷ್ಠ ಮೊತ್ತ...
1974ರ ಲಾರ್ಡ್ಸ್ ಟೆಸ್ಟ್ ಬಳಿಕ ಇಂಗ್ಲೆಂಡ್ ವಿರುದ್ಧ ಭಾರತದಿಂದ ದಾಖಲಾದ ಅತಿ ಕನಿಷ್ಠ ಮೊತ್ತ ಇದಾಗಿದೆ. ಅಂದು ಕೇವಲ 42 ರನ್ನಿಗೆ ಸರ್ವಪತನಗೊಂಡಿತ್ತು. ಇದು ಇಂಗ್ಲೆಂಡ್ ವಿರುದ್ಧ ಭಾರತದಿಂದ ದಾಖಲಾದ ಕನಿಷ್ಠ ಮೊತ್ತ.

ಒಟ್ಟಾರೆಯಾಗಿ ಇಂಗ್ಲೆಂಡ್ ವಿರುದ್ಧ ದಾಖಲಾದ ಮೂರನೇ ಕನಿಷ್ಠ ಮೊತ್ತವಾಗಿದೆ. ಹೆಡಿಂಗ್ಲಿ ಹಾಗೂ 1974ರ ಲಾರ್ಡ್ಸ್ ಟೆಸ್ಟ್ ಹೊರತುಪಡಿಸಿ 1952ರ ಒಲ್ಡ್ ಟ್ರಾಫರ್ಡ್ ಟೆಸ್ಟ್‌ನಲ್ಲಿ 58 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಜೋಸ್ ಬಟ್ಲರ್ ದಾಖಲೆ...
ಭಾರತ ಇನ್ನಿಂಗ್ಸ್‌ನ ಮೊದಲ ಐದು ಕ್ಯಾಚ್‌ಗಳನ್ನು ಹಿಡಿದಿರುವ ಜೋಸ್ ಬಟ್ಲರ್ ವಿಶಿಷ್ಟ ದಾಖಲೆಗೆ ಭಾಜನರಾಗಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಬ್ರಾಡ್ ಹಡ್ಡಿನ್ ಬಳಿಕ ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌‌ನಲ್ಲಿ ಮೊದಲ ಐದು ಬ್ಯಾಟ್ಸ್‌ಮನ್‌ಗಳನ್ನು ಹೊರದಬ್ಬಲು (ಸ್ಟಂಪ್ ಅಥವಾ ಕ್ಯಾಚ್) ಪಾಲುದಾರಿಕೆ ವಹಿಸಿದ ಆಟಗಾರ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ಈ ಹಿಂದೆ 2014ರ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಹಡ್ಡಿನ್ ಭಾರತದ ವಿರುದ್ಧ ದಾಖಲೆ ಬರೆದಿದ್ದರು. ಅದನ್ನೀಗ ಬಟ್ಲರ್ ಸರಿಗಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರಲ್ಲಿ ಭಾರತದ ಅತಿ ಕನಿಷ್ಠ ಮೊತ್ತಗಳು:
36 ರನ್, ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್ (2020),
42 ರನ್, ಇಂಗ್ಲೆಂಡ್ ವಿರುದ್ಧ, ಲಾರ್ಡ್ಸ್ (1974),
58 ರನ್, ಆಸ್ಟ್ರೇಲಿಯಾ ವಿರುದ್ಧ, ಬ್ರಿಸ್ಬೇನ್ (1947),
58 ರನ್, ಇಂಗ್ಲೆಂಡ್ ವಿರುದ್ಧ, ಮ್ಯಾಂಚೆಸ್ಟರ್ (1952),
66 ರನ್, ದ.ಆಫ್ರಿಕಾ ವಿರುದ್ಧ, ಡರ್ಬನ್ (1996),
67 ರನ್, ಆಸ್ಟ್ರೇಲಿಯಾ ವಿರುದ್ಧ, ಮೆಲ್ಬೋರ್ನ್ (1948),
75 ರನ್, ವೆಸ್ಟ್‌ಇಂಡೀಸ್ ವಿರುದ್ಧ, ಡೆಲ್ಲಿ (1987),
76 ರನ್, ದ.ಆಫ್ರಿಕಾ ವಿರುದ್ಧ, ಅಹಮದಾಬಾದ್ (2008),
78 ರನ್, ಇಂಗ್ಲೆಂಡ್ ವಿರುದ್ಧ, ಲೀಡ್ಸ್ (2021).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.