ADVERTISEMENT

IND vs ENG: 8 ರನ್ನಿಗೆ 5 ವಿಕೆಟ್ ಪಡೆದ ರೂಟ್; ಭಾರತ 145ಕ್ಕೆ ಆಲೌಟ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 16:42 IST
Last Updated 25 ಫೆಬ್ರುವರಿ 2021, 16:42 IST
ಇಂಗ್ಲೆಂಡ್ ನಾಯಕ ಜೋ ರೂಟ್ ಕೈಚಳಕ
ಇಂಗ್ಲೆಂಡ್ ನಾಯಕ ಜೋ ರೂಟ್ ಕೈಚಳಕ   

ಅಹಮದಾಬಾದ್: ಇಂಗ್ಲೆಂಡ್ ನಾಯಕ ಜೋ ರೂಟ್ ಮಾರಕ ದಾಳಿಗೆ (8 ರನ್ನಿಗೆ 5 ವಿಕೆಟ್) ತತ್ತರಿಸಿರುವ ಟೀಮ್ ಇಂಡಿಯಾ, ಇಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 145 ರನ್‌ಗಳಿಗೆ ಆಲೌಟಾಗಿದೆ.

ಅಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 33 ರನ್‌ಗಳ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಅರೆಕಾಲಿಕ ಬೌಲರ್ ಆಗಿರುವ ಹೊರತಾಗಿಯೂ ಅದ್ಭುತ ದಾಳಿ ಸಂಘಟಿಸಿದ ರೂಟ್ ಕೇವಲ 8 ರನ್ ತೆತ್ತು ಐದು ವಿಕೆಟ್ ಪಡೆದು ಭಾರತ ನೆಲದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದರು.

ADVERTISEMENT

ಅಹಮದಾಬಾದ್‌ ಮೊಟೆರಾದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ವೈಫಲ್ಯವನ್ನು ಅನುಭವಿಸಿದರು.

ಮೂರು ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಭಾರತೀಯ ತಂಡದ ದಾಂಡಿಗರು ಎರಡನೇ ದಿನದಾಟದಲ್ಲಿ ಪೆವಿಲಿಯನ್ ಪೆರೇಡ್ ನಡೆಸಿದರು.

ಉಪನಾಯಕ ಅಜಿಂಕ್ಯ ರಹಾನೆ (7) ನಿರಾಸೆ ಮೂಡಿಸಿದರು. ಅರ್ಧಶಕ ಗಳಿಸಿದ್ದ ರೋಹಿತ್ ಶರ್ಮಾ (66) ಸಂಪೂರ್ಣ ಪ್ರಯೋಜನ ಪಡೆಯುವಲ್ಲಿಸಫಲರಾಗಲಿಲ್ಲ. ಇವರಿಬ್ಬರು ಎಡಗೈ ಸ್ಪಿನ್ನರ್ ಜ್ಯಾಕ್ ಲೀಚ್ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ವಿಕೆಟ್ ಕೀಪರ್ ರಿಷಭ್ ಪಂತ್ (1), ವಾಷಿಂಗ್ಟನ್ ಸುಂದರ್ (0) ಹಾಗೂ ಅಕ್ಷರ್ ಪಟೇಲ್ (0) ಅವರನ್ನು ಇಂಗ್ಲೆಂಡ್ ನಾಯಕ ಜೋ ರೂಟ್ ಹೊರದಬ್ಬಿದರು.

ರವಿಚಂದ್ರನ್ ಅಶ್ವಿನ್ (17) ಸ್ವಲ್ಪ ಹೊತ್ತು ಹೋರಾಟ ನೀಡಿದರೂ ಅವರು ಕೂಡಾ ರೂಟ್‌ ದಾಳಿಯಲ್ಲಿ ಔಟಾದರು. ಅಂತಿಮವಾಗಿ ಜಸ್‌ಪ್ರೀತ್ ಬೂಮ್ರಾರನ್ನು (1) ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸುವುದರೊಂದಿಗೆ ಜೋ ರೂಟ್ ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದರು.

ಪರಿಣಾಮ ಭಾರತ 53.2 ಓವರ್‌ಗಳಲ್ಲೇ 145 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 6.2 ಓವರ್‌ಗಳನ್ನು ಎಸೆದಿರುವ ರೂಟ್ ದಾಳಿಯಲ್ಲಿ ಮೂರು ಮೇಡನ್ ಓವರ್‌ಗಳು ಸೇರಿದ್ದವು.

ಅತ್ತ ಜ್ಯಾಕ್ ಲೀಚ್ 54 ರನ್ನಿಗೆ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಭಾರತವು ಕೊನೆಯ ಏಳು ವಿಕೆಟ್‌ಗಳನ್ನು ಕೇವಲ 31 ರನ್ ಅಂತರದಲ್ಲಿ ಕಳೆದುಕೊಂಡಿತ್ತು.

ಈ ಮೊದಲು ಸ್ಥಳೀಯ ಹೀರೊ ಅಕ್ಷರ್ ಪಟೇಲ್ (38ಕ್ಕೆ 6 ವಿಕೆಟ್) ದಾಳಿಗೆ ಕುಸಿದಿದ್ದ ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್‌ನಲ್ಲಿ 112 ರನ್‌ಗಳಿಗೆ ಆಲೌಟ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.