ADVERTISEMENT

IND vs ENG: ಆಂಗ್ಲರ ದಾಳಿಗೆ ತತ್ತರಿಸಿದ ಭಾರತ ಕೇವಲ 78ಕ್ಕೆ ಆಲೌಟ್

ರಾಯಿಟರ್ಸ್
Published 26 ಆಗಸ್ಟ್ 2021, 0:58 IST
Last Updated 26 ಆಗಸ್ಟ್ 2021, 0:58 IST
ಇಂಗ್ಲೆಂಡ್ ಆಟಗಾರರ ಸಂಭ್ರಮ
ಇಂಗ್ಲೆಂಡ್ ಆಟಗಾರರ ಸಂಭ್ರಮ   

ಲೀಡ್ಸ್‌: ಜೇಮ್ಸ್ ಆ್ಯಂಡರ್ಸನ್ ಮತ್ತು ಕ್ರೇಗ್ ಓವರ್ಟನ್ ಅವರ ವೇಗದ ದಾಳಿ, ಭಾರತದ ಬಲಿಷ್ಠ ಬ್ಯಾಟಿಂಗ್‌ ಬಳಗಕ್ಕೆ ಆಘಾತ ನೀಡಿತು. ಹೀಗಾಗಿ ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ತಂಡ 78 ರನ್‌ಗಳಿಗೆ ಪತನ ಕಂಡಿತು. ಮೊದಲ ದಿನದಾಟದ ಅಂತ್ಯಕ್ಕೆ ಬುಧವಾರ 42 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 120 ರನ್ ಗಳಿಸಿರುವ ಆತಿಥೇಯರು ಭಾರಿ ಮುನ್ನಡೆಯತ್ತ ಸಾಗಿದ್ದಾರೆ.

ರೋರಿ ಬರ್ನ್ಸ್ (ಬ್ಯಾಟಿಂಗ್ 52) ಮತ್ತು ಹಸೀಬ್ ಹಮೀದ್‌ (ಬ್ಯಾಟಿಂಗ್‌ 60) ಕ್ರೀಸ್‌ ಕಾಯ್ದುಕೊಂಡಿದ್ದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಅಗ್ರ ಕ್ರಮಾಂಕ ಆ್ಯಂಡರ್ಸನ್ ದಾಳಿಗೆ ನಲುಗಿದರೆ ಕ್ರೇಗ್ ಓವರ್ಟನ್‌ ಕೆಳಕ್ರಮಾಂಕಕ್ಕೆ ಪೆಟ್ಟು ನೀಡಿದರು.

ADVERTISEMENT

21 ರನ್ ಗಳಿಸುವಷ್ಟರಲ್ಲಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಮೂವರ ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಮುಂಬೈ ಜೋಡಿ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಭರವಸೆ ಮೂಡಿಸಿದರು. ಅವರ ಹೋರಾಟ 35 ರನ್‌ಗಳ ಜೊತೆಯಾಟದಲ್ಲಿ ಕೊನೆ ಗೊಂಡಿತು.

ಮೊದಲ ಓವರ್‌ನಲ್ಲೇ ಕೆ.ಎಲ್‌.ರಾಹುಲ್ ಅವರನ್ನು ಆ್ಯಂಡರ್ಸನ್‌ ವಾಪಸ್ ಕಳುಹಿಸಿದರು. ನೇರ ಎಸೆತವನ್ನು ಡ್ರೈವ್ ಮಾಡಲು ಪ್ರಯತ್ನಿಸಿದ ರಾಹುಲ್ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಶೂನ್ಯಕ್ಕೆ ವಾಪಸಾದರು. ಸ್ವಿಂಗ್ ಆದ ಚೆಂಡಿನ ಗತಿ ನಿರ್ಣಯಿಸಲು ವಿಫಲರಾದ ಚೇತೇಶ್ವರ್ ಪೂಜಾರ ಕೂಡ ವಿಕೆಟ್‌ ಕೀಪರ್‌ಗೆ ಕ್ಯಾಚ್ ನೀಡಿ ಮರಳಿದರು. ವಿರಾಟ್ ಕೊಹ್ಲಿ ಅವರೂ ಬಟ್ಲರ್ ಪಡೆದ ಕ್ಯಾಚ್‌ಗೆ ಬಲಿಯಾದರು.

ರೋಹಿತ್‌– ರಹಾನೆ ರಕ್ಷಣಾ ಕಾರ್ಯ: ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಲಯ ಕಂಡುಕೊಂಡ ನಂತರ ಬೌಂಡರಿಗಳು ಹರಿದು ಬಂದವು. ರಹಾನೆ ಕೊಂಚ ಆಕ್ರಮಣಕಾರಿಯಾಗಿ ಕಂಡುಬಂದರು. ಇಬ್ಬರೂ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಆದರೆ ಭೋಜನ ವಿರಾಮಕ್ಕೆ ತೆರಳುವ ಮುನ್ನ ಒಲಿ ರಾಬಿನ್ಸನ್ ಅವರು ಅಜಿಂಕ್ಯ ವಿಕೆಟ್ ಕಬಳಿಸಿದರು. ಭೋಜನದ ನಂತರವೂ ತಂಡದ ಕಳಪೆ ಬ್ಯಾಟಿಂಗ್ ಮುಂದುವರಿಯಿತು. ಅಪಾಯಕಾರಿ ರಿಷಭ್ ಪಂತ್ ಅವರನ್ನು ರಾಬಿನ್ಸನ್ ವಿಕೆಟ್ ಕೀಪರ್‌ ಕೈವಸಿನಲ್ಲಿ ಬಂಧಿಯಾಗಿಸಿದರು. 105 ಎಸೆತಗಳಲ್ಲಿ 19 ರನ್ ಗಳಿಸಿದ್ದ ರೋಹಿತ್ ಶರ್ಮಾ ವಿಕೆಟ್ ಗಳಿಸುವುದರೊಂದಿಗೆ ಓವರ್ಟನ್ ಆಕ್ರಮಣ ಆರಂಭವಾಯಿತು. ಕೊನೆಯ ಆರು ವಿಕೆಟ್‌ 22 ರನ್‌ಗಳಿಗೆ ಉರುಳಿದವು.

ಸಿರಾಜ್ ಮೇಲೆ ಚೆಂಡೆಸೆದ ಪ್ರೇಕ್ಷಕರು: ಪಂದ್ಯದ ಮೊದಲ ದಿನ ಇಂಗ್ಲೆಂಡ್ ಇನಿಂಗ್ಸ್ ಸಂದರ್ಭದಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಮೇಲೆ ಪ್ರೇಕ್ಷಕರು ಚೆಂಡು ಎಸೆದ ಘಟನೆ ನಡೆದಿದೆ. ದಿನದಾಟದ ಮುಕ್ತಾಯದ ನಂತರ ರಿಷಭ್ ಪಂತ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

‘ಏನಾದರೂ ಹೇಳಲು ಬಯಸಿದರೆ ಹೇಳಿಬಿಡಬೇಕು. ಆದರೆ ಫೀಲ್ಡರ್‌ಗಳ ಮೇಲೆ ಯಾವುದೇ ವಸ್ತುಗಳನ್ನು ಎಸೆಯಬಾರದು. ಅದು ಒಳ್ಳೆಯದಲ್ಲ’ ಎಂದು ಪಂತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.