ADVERTISEMENT

IND vs ENG: ಮರಳಿ ಅರಳಿದ ಚೇತೇಶ್ವರ್ ಪೂಜಾರ; ತಿರುಗೇಟು ನೀಡುವ ಛಲದಲ್ಲಿ ಭಾರತ

ಪಿಟಿಐ
Published 28 ಆಗಸ್ಟ್ 2021, 3:00 IST
Last Updated 28 ಆಗಸ್ಟ್ 2021, 3:00 IST
ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿ
ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿ   

ಲೀಡ್ಸ್‌: ಕಳೆದ ಹಲವು ಪಂದ್ಯಗಳಿಂದ ಬ್ಯಾಟಿಂಗ್ ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದ ಚೇತೇಶ್ವರ್ ಪೂಜಾರ ಶುಕ್ರವಾರ ಇಲ್ಲಿ ಸಫಲರಾದರು.

ಆತಿಥೇಯ ಇಂಗ್ಲೆಂಡ್ ಮುಂದೊ ಡ್ಡಿರುವ ಬೃಹತ್‌ ಸವಾಲು ಮೀರಿ ನಿಲ್ಲುವ ಛಲದಲ್ಲಿರುವ ಭಾರತಕ್ಕೆ ಭರವಸೆ ಮೂಡಿಸಿದರು. ಮೂರನೇ ದಿನದಾಟದ ಕೊನೆಯಲ್ಲಿ ಪೂಜಾರ (ಬ್ಯಾಟಿಂಗ್ 91; 180ಎ, 15ಬೌಂಡರಿ) ಮತ್ತು ನಾಯಕ ವಿರಾಟ್ ಕೊಹ್ಲಿ (ಬ್ಯಾಟಿಂಗ್ 45; 94ಎ, 6ಬೌಂ) ಕ್ರೀಸ್‌ ನಲ್ಲಿದ್ದಾರೆ. ಮುರಿಯದ ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಇವರಿಬ್ಬರು ಗಳಿಸಿರುವ 99 ರನ್‌ಗಳಿಂದಾಗಿ ತಂಡವು ಎರಡನೇ ಇನಿಂಗ್ಸ್‌ನಲ್ಲಿ 80 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 215 ರನ್‌ ಗಳಿಸಿದೆ.

ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 432 ರನ್ ಗಳಿಸಿತು. ಅದರೊಂದಿಗೆ 354 ರನ್‌ಗಳ ಮುನ್ನಡೆ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನಡೆಸಿದೆ. ಆತಿಥೇಯರ ಬಾಕಿ ಚುಕ್ತಾ ಮಾಡಲು ಭಾರತ ತಂಡವು ಇನ್ನೂ 139 ರನ್‌ ಗಳಿಸಬೇಕು. ವಿರಾಟ್ ಕೊಹ್ಲಿ ಬಳಗವು ಮೊದಲ ಇನಿಂಗ್ಸ್‌ನಲ್ಲಿ 78 ರನ್‌ಗಳಿಗೆ ಕುಸಿದಿತ್ತು.

ADVERTISEMENT

ರೋಹಿತ್–ಪೂಜಾರ ಜೊತೆಯಾಟ:ಎರಡನೇ ಇನಿಂಗ್ಸ್ ಆರಂಭಿಸಿದ ರೋಹಿತ್ ಮತ್ತು ರಾಹುಲ್ ಎಚ್ಚರಿಕೆಯ ಆಟವಾಡಿದರು. ರೋಹಿತ್ ಆಟದಲ್ಲಿ ಆತ್ಮವಿಶ್ವಾಸದ ಸೆಲೆ ಇತ್ತು. ಆದರೆ ರಾಹುಲ್ ಸ್ವಲ್ಪ ಕಷ್ಟಪಟ್ಟರು. 19ನೇ ಓವರ್‌ನಲ್ಲಿ ರಾಹುಲ್ ವಿಕೆಟ್ ಗಳಿಸುವಲ್ಲಿ ಕ್ರೇಗ್ ಸಫಲರಾದರು.

ರೋಹಿತ್ ಜೊತೆಗೂಡಿದ ಪೂಜಾರ ಎದುರಾಳಿ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 82 ರನ್‌ ಪೇರಿಸಿದರು. 38ನೇ ಓವರ್‌ನಲ್ಲಿ ರೋಹಿತ್ ಅರ್ಧಶತಕದ ಗಡಿ ದಾಟಿದರು. ಅದಕ್ಕಾಗಿ ಅವರು 125 ಎಸೆತಗಳನ್ನು ಆಡಿದರು.

ಇವರಿಬ್ಬರ ಜೊತೆಯಾಟದಿಂದಾಗಿ ತಂಡವು ಚಹಾ ವಿರಾಮದ ವೇಳೆಗೆ 112 ರನ್‌ ಗಳಿಸಿತ್ತು. ವಿರಾಮದ ನಂತರದ ಆರಂಭದಲ್ಲಿಯೇ ರೋಹಿತ್ ಶರ್ಮಾ ವಿಕೆಟ್ ಗಳಿಸಿದ ರಾಬಿನ್ಸನ್ ಈ ಜೊತೆಯಾಟವನ್ನು ಮುರಿದರು.

ಈ ಹಂತದಲ್ಲಿ ಪೂಜಾರ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆಯ ಆಟವಾಡಿದರು. ಸುಮಾರು ಒಂದೂವರೆ ವರ್ಷದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ದಾಖಲಿಸದ ವಿರಾಟ್, ಇಲ್ಲಿ ಅರ್ಧಶತಕದ ಸನಿಹ ತಲುಪಿದರು.

ಪೂಜಾರ 91 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಎದುರಾಳಿ ಬೌಲರ್‌ಗಳ ಬೌನ್ಸರ್‌ಗಳಿಗೆ ಮತ್ತು ಶಾಟ್ ಪಿಚ್ ಎಸೆತಗಳಿಗೆ ಪೂಜಾರಾ ಪುಲ್‌ಶಾಟ್‌ಗಳ ಉತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.