ADVERTISEMENT

IND vs ENG: ಟೀ ವಿರಾಮಕ್ಕೆ ಇಂಗ್ಲೆಂಡ್ 119/5; ಒಟ್ಟು ಮುನ್ನಡೆ 360 ರನ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 9:14 IST
Last Updated 8 ಫೆಬ್ರುವರಿ 2021, 9:14 IST
   

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಟೀ ವಿರಾಮದ ಹೊತ್ತಿಗೆ ಇಂಗ್ಲೆಂಡ್ ತಂಡವು 27 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ.

ಈ ಮೂಲಕ 360 ರನ್‌ಗಳ ಒಟ್ಟು ಮುನ್ನಡೆಯನ್ನು ಗಳಿಸಿದೆ. ದಿನದ ಕೊನೆಯ ಅವಧಿಯಲ್ಲಿ ಇಂಗ್ಲೆಂಡ್ ಡಿಕ್ಲೇರ್ ಮಾಡುವ ಸಾಧ್ಯತೆಯಿದೆ.

241 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರ ಪಡೆಗೆ ಭಾರತೀಯ ಬೌಲರ್‌ಗಳು ತಿರುಗೇಟು ನೀಡಿದರು. ಅಲ್ಲದೆ 101 ರನ್ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಯಿತು.

ADVERTISEMENT

ಮೊದಲ ಎಸೆತದಲ್ಲಿ ರೋರಿ ಬರ್ನ್ಸ್ (0) ಹೊರದಬ್ಬಿದ ರವಿಚಂದ್ರನ್ ಅಶ್ವಿನ್ ಮೊದಲ ಆಘಾತ ನೀಡಿದರು. ಡಾಮಿನಿಕ್ ಸಿಬ್ಲಿ (16) ಹಾಗೂ ಬೆನ್ ಸ್ಟೋಕ್ಸ್ (7) ಕೂಡಾ ಅಶ್ವಿನ್ ಬಲೆಗೆ ಬಿದ್ದರು.

ಈ ನಡುವೆ ಡ್ಯಾನಿಯಲ್ ಲಾರೆನ್ಸ್ (18) ವಿಕೆಟ್ ಪಡೆದ ಇಶಾಂತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಸಾಧನೆ ಮಾಡಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಾಧನೆ ಮಾಡಿರುವ ಜೋ ರೂಟ್ (40) ದ್ವಿತೀಯ ಇನ್ನಿಂಗ್ಸ್‌ನಲ್ಲೂ ಆತಿಥೇಯರನ್ನು ಕಾಡಿದರು. ಆದರೆ ರೂಟ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದ ಜಸ್‌ಪ್ರೀತ್ ಬೂಮ್ರಾ ಭಾರತಕ್ಕೆ ನೆರವಾದರು.

ಭಾರತ 337ಕ್ಕೆ ಆಲೌಟ್...
ಈ ಮೊದಲು 6 ವಿಕೆಟ್ ನಷ್ಟಕ್ಕೆ 257 ಎಂಬ ಮೊತ್ತದಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ವಾಷಿಂಗ್ಟನ್ ಸುಂದರ್ ಅಜೇಯ ಅರ್ಧಶತಕದ (85*) ನೆರವಿನಿಂದ 337 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

138 ಎಸೆತಗಳನ್ನು ಎದುರಿಸಿದ ಸುಂದರ್ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು. ಆದರೆ ವಿಕೆಟ್‌ನ ಇನ್ನೊಂದು ತುದಿಯಿಂದ ಸೂಕ್ತ ಬೆಂಬಲ ಸಿಗದೇ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತವಾದರು.

ರವಿಚಂದ್ರನ್ ಅಶ್ವಿನ್ 31 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ಅಲ್ಲದೆ ಸುಂದರ್ ಜೊತೆಗೆ 80 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಇನ್ನುಳಿದಂತೆ ಶಹಬಾಜ್ ನದೀಂ (0), ಇಶಾಂತ್ ಶರ್ಮಾ (4) ಹಾಗೂ ಜಸ್‌ಪ್ರೀತ್ ಬೂಮ್ರಾ (0) ರನ್ ಗಳಿಸಿದರು. ಇಂಗ್ಲೆಂಡ್ ಪರ ಡಾಮ್ ಬೆಸ್ ನಾಲ್ಕು ಮತ್ತು ಜೇಮ್ಸ್ ಆಂಡ್ರೆಸನ್, ಜೋಫ್ರಾ ಆರ್ಚರ್ ಹಾಗೂ ಜ್ಯಾಕ್ ಲೀಚ್ ತಲಾ ನಾಲ್ಕು ವಿಕೆಟ್‌‍ಗಳನ್ನು ಕಬಳಿಸಿದರು.

ನಾಯಕ ಇಂಗ್ಲೆಂಡ್ ಅಮೋಘ ದ್ವಿಶತಕದ (218) ನೆರವಿನೊಂದಿಗೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 578 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಡಾಮಿನಿಕ್ ಸಿಬ್ಲಿ (87) ಹಾಗೂ ಬೆನ್ ಸ್ಟೋಕ್ಸ್ (82) ಆಕರ್ಷಕ ಅರ್ಧಶತಕ ಬಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.