ಮ್ಯಾಂಚೆಸ್ಟರ್: ಇಂಗ್ಲೆಂಡ್‌ನಲ್ಲಿರುವ ಎಲ್ಲ ಪ್ರಮುಖ ಕ್ರೀಡಾಂಗಣಗಳಲ್ಲಿ ಓಲ್ಡ್ ಟ್ರಾಫರ್ಡ್‌ಗೆ ಜೋ ರೂಟ್ ಮನದಲ್ಲಿ ವಿಶೇಷ ಸ್ಥಾನವಿದೆ. ಪ್ರಥಮ ಆ್ಯಷಸ್ ಟೆಸ್ಟ್ ಸರಣಿಯ ಪಂದ್ಯವನ್ನು 1884ರಲ್ಲಿ ಆಯೋಜಿಸಿದ್ದ ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಯಶಸ್ವಿಯಾದವರು ಬೆರಳೆಣಿಕೆಯಷ್ಟು ಆಟಗಾರರು ಮಾತ್ರ. ಅದರಲ್ಲಿ ರೂಟ್ ಕೂಡ ಒಬ್ಬರು.
ಸೂರ್ಯಕಿರಣಗಳು ಚುಂಬಿಸಿದ ಶುಕ್ರವಾರದಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ರೂಟ್ ಇಲ್ಲಿ (150;248ಎ) ಅಮೋಘ ಶತಕ ದಾಖಲಿಸಿದರು. ಅದರಿಂದಾಗಿ ಆತಿಥೇಯ ತಂಡವು ಭಾರತದ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ಗೆ 544 ರನ್ ಗಳಿಸಿದೆ. ಅದರೊಂದಿಗೆ 186 ರನ್‌ಗಳ ಮುನ್ನಡೆ ಪಡೆಯಿತು. ಟೆಸ್ಟ್ ಕ್ರಿಕೆಟ್‌ನಲ್ಲಿ 34 ವರ್ಷದ ರೂಟ್ ತಮ್ಮ 38ನೇ ಶತಕ ದಾಖಲಿಸಿದರು. ಅಲ್ಲದೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳಲ್ಲಿ ಎರಡನೇ ಸ್ಥಾನಕ್ಕೆ ಏರಿದರು. ಅವರು ಈ ಹಾದಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ (13378) ಅವರನ್ನು ಮೀರಿ ನಿಂತರು. ಸಚಿನ್ ತೆಂಡೂಲ್ಕರ್ (15921) ಮೊದಲ ಸ್ಥಾನದಲ್ಲಿದ್ದಾರೆ.
ಭಾರತದ ಎದುರು ರೂಟ್ ಅವರು ತಮ್ಮ ತವರಿನಂಗಳದಲ್ಲಿ ಗಳಿಸಿದ 9ನೇ ಶತಕ ಇದಾಗಿದೆ. ಈ ಹಾದಿಯಲ್ಲಿ ಅವರು ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ಅವರು ಇಂಗ್ಲೆಂಡ್ ಎದುರು ಗಳಿಸಿದ್ದ 8 ಶತಕಗಳ ದಾಖಲೆಯನ್ನು ಮೀರಿದರು.
ಯಾವುದೇ ಮೋಡಗಳು ಇರದ ನೀಲಿ ಆಗಸ ಮತ್ತು ಸೂರ್ಯನ ಕಿರಣಗಳ ಚಿನ್ನಾಟದಲ್ಲಿ ರೂಟ್ ಆಟ ಅರಳಿತು. ದಾಖಲೆ ನಿರ್ಮಿಸುವುದನ್ನು ಹವ್ಯಾಸ ವನ್ನಾಗಿಸಿಕೊಂಡಿರುವ ರೂಟ್, ದೊಡ್ಡ ಹೊಡೆತಗಳನ್ನು ಆಡುವತ್ತ ಗಮನ ನೀಡಲಿಲ್ಲ. ಆದರೆ ಸಾಂಪ್ರದಾಯಿಕ ಮತ್ತು ಸೊಗಸಾದ ಹೊಡೆತಗಳನ್ನು ಪ್ರಯೋಗಿಸುತ್ತ ಫೀಲ್ಡರ್ ಮತ್ತು ಬೌಲರ್‌ಗಳಿಗೆ ಸವಾಲೊಡ್ಡಿದರು. ತಾಳ್ಮೆ ಮತ್ತು ಏಕಾಗ್ರತೆ ಮೇಳೈಸಿದ್ದ ಅವರ ಆಟ ಅಭಿಮಾನಿಗಳ ಮನಗೆದ್ದಿತು.
ಅವರು ಮತ್ತು ಒಲಿ ಪೋಪ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 144 ರನ್ ಸೇರಿಸಿದರು. ಇದರಿಂದಾಗಿ ಊಟದ ವಿರಾಮದ ವೇಳೆಗೆ ತಂಡದ ಮೊತ್ತವು 2 ವಿಕೆಟ್‌ಗಳಿಗೆ 332 ರನ್‌ಗಳಾಗಿತ್ತು. ಈ ಹಂತದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಮಾಡಿದ ಬೌಲಿಂಗ್ ಬದಲಾವಣೆ, ನಿಯೋಜನೆಗಳು ಫಲ ನೀಡಲಿಲ್ಲ. ಪಿಚ್ ಕೂಡ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತಿರಲಿಲ್ಲ. ಬೌಲರ್‌ಗ ಶ್ರಮಕ್ಕೆ ಪ್ರತಿಫಲ ಸಿಗಲಿಲ್ಲ.
ಈ ಸಂದರ್ಭದಲ್ಲಿ ದಾಳಿಗಿಳಿದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರು ಪೋಪ್ (71 ರನ್) ಮತ್ತು ಹ್ಯಾರಿ ಬ್ರೂಕ್ (3 ರನ್) ಅವರ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಇದರಿಂದಾಗಿ ಭಾರತ ಬಳಗದಲ್ಲಿ ಉತ್ಸಾಹ ಮರುಕಳಿಸಿತು. ಆದರೆ, ರೂಟ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಅವರ ಆಟದ ಮುಂದೆ ಮತ್ತೆ ಬೌಲರ್‌ಗಳು ಬಸವಳಿದರು. ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ 142 ರನ್ ಸೇರಿಸಿದರು. ಸ್ಟೋಕ್ಸ್ 66 ರನ್ ಗಳಿಸಿದ್ದಾಗ ಕಾಲಿನ ಸ್ನಾಯು ಸೆಳೆತದಿಂದಾಗಿ ಮೈದಾನ ತೊರೆದರು.
ಅದರ ಬೆನ್ನಲ್ಲೇ ಸಿನ್ನರ್ ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ ಕ್ರೀಸ್‌ನಿಂದ ಮುಂದೆ ಬಂದಿದ್ದ ರೂಟ್ ಅವರನ್ನು ಧ್ರುವ ಜುರೇಲ್ ಸ್ಟಂಪ್ಡ್ ಔಟ್ ಮಾಡಿದರು. ನಂತರ ಬಂದ ಜೆಮಿ ಸ್ಮಿತ್ (9) ಮತ್ತು ಕ್ರಿಸ್ ವೋಕ್ಸ್ (4) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ಹಂತದಲ್ಲಿ ಮತ್ತೆ ಬ್ಯಾಟಿಂಗ್‌ಗೆ ಇಳಿದ ಸ್ಟೋಕ್ಸ್ (ಔಟಾಗದೇ 77) ಮತ್ತು ಲಿಯಾನ್ ಲಿಯಾಮ್ ದಾಸನ್ (ಔಟಾಗದೇ 21) ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.
ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ಹೊಸ ಚೆಂಡಿನಲ್ಲಿ ವಿಶೇಷವಾಗಿರುವಂತದ್ದೇನೂ ಮಾಡಲಾಗಲಿಲ್ಲ. ಸಿರಾಜ್ ಲಘು ಗಾಯದಿಂದಾಗಿ ಕಷ್ಟಪಟ್ಟರು. ಶಾರ್ದೂಲ್ ಠಾಕೂರ್ ಮತ್ತು ಪದಾರ್ಪಣೆ ಮಾಡಿದ ಅನ್ಷುಲ್ ಕಂಬೋಜ್ ಅವರೂ ಬ್ಯಾಟರ್‌ಗಳ ಮೇಲೆ ಒತ್ತಡ ಹಾಕುವಲ್ಲಿ ವಿಫಲರಾದರು. ಲೈನ್ ಮತ್ತು ಲೆಂಗ್ತ್ ನಿರ್ವಹಿಸಲು ಪರದಾಡಿದರು. ರೂಟ್ ಮತ್ತು ಸ್ಟೋಕ್ಸ್ ಲೀಲಾಜಾಲವಾಗಿ ಆಡಿದರು.
ಈ ಅಂಗಳದ ಪಕ್ಕದಲ್ಲಿಯೇ ಇರುವ ಓಲ್ಡ್ ಟ್ರಾಫರ್ಡ್ ಫುಟ್‌ಬಾಲ್
ಕ್ರೀಡಾಂಗಣವನ್ನು ‘ಕನಸುಗಳ ರಂಗ ಮಂದಿರ’ ಎಂದು ಕರೆಯಲಾಗುತ್ತದೆ. ಈಗ ಕ್ರಿಕೆಟ್ ಮೈದಾನವು ‘ರೂಟ್ ಅವರ ಆಟದ ಮೈದಾನ’ವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.