ಚೆನ್ನೈ: ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿಶಿಷ್ಟ ದಾಖಲೆ ಬರೆದಿದ್ದಾರೆ.
ಭಾರತ ವಿರುದ್ಧ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಜೋ ರೂಟ್ ಈ ಸ್ಮರಣೀಯ ಮೈಲುಗಲ್ಲು ತಲುಪಿದರು.
ಇಲ್ಲಿ ಗಮನಾರ್ಹ ಅಂಶವೆಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ 20 ಶತಕಗಳನ್ನು ಬಾರಿಸಿರುವ ಜೋ ರೂಟ್ ಈ ಪೈಕಿ 10 ಬಾರಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದ್ದಾರೆ.
ಅಷ್ಟೇ ಯಾಕೆ ಜೋ ರೂಟ್ ಅವರು ಕೊನೆಯ ನಾಲ್ಕು ಟೆಸ್ಟ್ ಶತಕಗಳಲ್ಲಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಬರೆದಿದ್ದಾರೆ.
ಜೋ ರೂಟ್ ಕೊನೆಯ ನಾಲ್ಕು ಶತಕಗಳು:226, 228, 186 ಮತ್ತು 150*
ಈ ಹಿಂದೆ 2007ನೇ ಇಸವಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಸತತ ನಾಲ್ಕುಟೆಸ್ಟ್ ಪಂದ್ಯಗಳಲ್ಲಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದ್ದರು. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಶ್ರೇಷ್ಠ ಸಾಧನೆಯಾಗಿದೆ.
ಇನ್ನು ವ್ಯಾಲಿ ಹಮ್ಮಾಂಡ್, ಡಾನ್ ಬ್ರಾಡ್ಮನ್, ಜಹೀರ್ ಅಬ್ಬಾಸ್, ಮುದಾಸ್ಸರ್ ನಜರ್ ಹಾಗೂ ಟಾಮ್ ಲೇಥಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಮೂರು ಬಾರಿ 150 ಅಥವಾ ಅದಕ್ಕಿಂತಲೂ ಹೆಚ್ಚು ರನ್‌ಗಳ ಸಾಧನೆ ಮಾಡಿದ್ದಾರೆ. ಈ ಪಟ್ಟಿಗೀಗ ಜೋ ರೂಟ್ ಸೇರ್ಪಡೆಯಾಗಿದ್ದಾರೆ.
ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ತಮ್ಮ 98 ಹಾಗೂ 99ನೇ ಟೆಸ್ಟ್ ಪಂದ್ಯಗಳಲ್ಲೂ ಜೋ ರೂಟ್ ಶತಕ ಸಾಧನೆ ಮಾಡಿದ್ದರು. ಈ ಮೂಲಕ 98,99 ಹಾಗೂ 100ನೇ ಟೆಸ್ಟ್ ಪಂದ್ಯಗಳಲ್ಲಿ ಹ್ಯಾಟ್ರಿಕ್ ಶತಕ ಸಾಧನೆ ಮಾಡಿದ ವಿಶ್ವದಏಕೈಕ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರವಾಗಿದ್ದರು. ಈ ಮೂರು ಟೆಸ್ಟ್ ಶತಕಗಳು 2021ನೇ ಸಾಲಿನಲ್ಲಿ ದಾಖಲಾಗಿರುವುದು ವಿಶೇಷ.
ಇದನ್ನೂ ಓದಿ:IND vs ENG 1st Test: ತಂಡವನ್ನು ಹುರಿದುಂಬಿಸಿದ ಕ್ಯಾಪ್ಟನ್ ಕೊಹ್ಲಿ
ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ:
ಕುಮಾರ ಸಂಗಕ್ಕರ: 4 (2007)
ವ್ಯಾಲಿ ಹಮ್ಮಾಂಡ್: 3 (1928-29)
ಡಾನ್ ಬ್ರಾಡ್ಮನ್: 3 (1937)
ಜಹೀರ್ ಅಬ್ಬಾಸ್: 3 (1982-93)
ಮುದಸ್ಸಾರ್ ನಜರ್: 3 (1983)
ಟಾಮ್ ಲೇಥಮ್: 3 (2018-19)
ಜೋ ರೂಟ್: 3 (2021)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.